ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸೊನ್ನೆ ಅಂಕ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಎತ್ತಿ ತೋರಿಸಿದರು.
“ಮೋದಿ ಪ್ರಚಾರದಿಂದ ಬದುಕಿರುವವರು”
“ಮೋದಿ ಅವರು ಕೇವಲ ಪ್ರಚಾರದಿಂದ ಬದುಕಿರುವವರು. ನೋಟು ಅಮಾನ್ಯೀಕರಣದಿಂದ ಯಾರಿಗೆ ಪ್ರಯೋಜನವಾಯಿತು? ‘ಅಚ್ಚೆ ದಿನ್ ಆಯೇಗಾ’ ಎಂದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದರು. ರೈತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಆದರೆ, ರೈತರು ಒಂದು ವರ್ಷ ಕಾಲ ಚಳವಳಿ ಏಕೆ ಮಾಡಬೇಕಾಯಿತು?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“11 ವರ್ಷ ತುಂಬಿಸಿದ್ದಾರೆ, ಅಷ್ಟೇ”
ಮೋದಿ ಸರ್ಕಾರದ 11 ವರ್ಷಗಳ ಆಡಳಿತವನ್ನು ಟೀಕಿಸಿದ ಸಿಎಂ, “ಪ್ರಮುಖ ಭರವಸೆಗಳನ್ನು ಈಡೇರಿಸಿಲ್ಲ. 11 ವರ್ಷ ತುಂಬಿಸಿದ್ದಾರೆ, ಅಷ್ಟೇ” ಎಂದು ಕುಟುಕಿದರು.
ಸುಳ್ಳಿಗೆ ಪ್ರಚಾರ, ಕರ್ನಾಟಕಕ್ಕೆ ಅನ್ಯಾಯ
ಮಾಧ್ಯಮಗಳು ಮೋದಿ ಸರ್ಕಾರಕ್ಕೆ ಅತಿಯಾದ ಪ್ರಚಾರ ನೀಡಿ, ಸುಳ್ಳು ವಿಷಯಗಳಿಗೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ, ಇವು ಜಾರಿಯಾಗುವುದಿಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದವರು, ನಂತರ ಅದೇ ಯೋಜನೆಗಳನ್ನು ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ನಕಲು ಮಾಡಿದರು” ಎಂದರು.
ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಿದ್ದರೆ, ಪ್ರಧಾನಿಯಾದ ಬಳಿಕ ಏನು ಮಾಡಿದರು ಎಂದು ಪ್ರಶ್ನಿಸಿದ ಅವರು, “ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 5,300 ಕೋಟಿ ರೂ. ಕೊಡುವುದಾಗಿ ಘೋಷಿಸಿ ಈಡೇರಿಸಲಿಲ್ಲ. 15ನೇ ಹಣಕಾಸು ಆಯೋಗ 11,495 ಕೋಟಿ ರೂ. ಕೊಡಬೇಕೆಂದು ಶಿಫಾರಸು ಮಾಡಿತ್ತು, ಆದರೂ ಕೊಡಲಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಬಿಜೆಪಿ ಈ ಬಗ್ಗೆ ಪ್ರಶ್ನಿಸುವ ಬದಲು ಅಪಪ್ರಚಾರ ಮಾಡುತ್ತಿದೆ” ಎಂದು ಆಕ್ಷೇಪಿಸಿದರು.