ಧಾರವಾಡ: ಯುವಕರಲ್ಲಿ ಡ್ರಗ್ ವಿರೋಧಿ ಚಳುವಳಿ ಆಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಧಾರವಾಡದ ಜೆ.ಎಸ್.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ವತಿಯಿಂದ ಏರ್ಪಡಿಸಿದ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಹಾಗೂ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ರಾಜ್ಯದ ಗೃಹ ಸಚಿವನಾಗಿದ್ದಾಗ ತಾಯಿ ಮನೆಗೆ ಬಂದಿದ್ದಳು. ಇಬ್ಬರು ಮಕ್ಕಳು ಡ್ರಗ್ ದಾಸರಾಗಿದ್ದಾರೆ. ಕುಟುಂಬವೇ ಕುಸಿದು ಹೋಗಿದೆ. ನನ್ನ ಮಕ್ಕಳಂತೆ ಇತರರು ಆಗಬಾರದು ಅಂದರು. ಆ ಘಟನೆ ನನ್ನನ್ನು ಚಿಂತನೆಗೆ ಹಚ್ಚಿತು. ಡ್ರಗ್ಸ್ ಅಭಿಯಾನ, ದಾಳಿ ನಡೆಸಿದೆವು. ದೊಡ್ಡವರನ್ನು ಜೈಲ್ ಗೆ ಹಾಕಿದೆವು ಎಂದರು.
ಇನ್ನೊಂದು ಘಟನೆ ಆಂಧ್ರದ ನಿರ್ಮಾಪಕರೊಬ್ಬರ ಮಗ ಬಂದು ಎರಡು ಮೂರು ತಿಂಗಳಾದರೂ ಡೆಪ್ಟೇಶನ್ ಮೇಲೆ ಆಂಧ್ರದ ಗೃಹ ಸಚಿವರಾಗಿ ಅಂತ ಕೇಳಿದರು. ಅಧಿಕಾರಿಗಳನ್ನು ಡೆಪ್ಟೇಶನ್ ಮೇಲೆ ಹಾಕುವುದು ನೋಡಿದ್ದೇವೆ. ಸಚಿವರನ್ನು ಡೆಪ್ಟೇಷನ್ ಹಾಕುವುದು ಎಂದರೆ ಏನು ಅಂತ ಅವರನ್ನು ಕೇಳಿದೆ. ಅವರು ಹೈದರಾಬಾದ್ ಸುತ್ತಲೂ ಡ್ರಗ್ಸ್ ಬಹಳ ಇದೆ. ಅದನ್ನು ನಿಯಂತ್ರಿಸಲು ಆ ರೀತಿ ಹೇಳಿದೆ ಎಂದು ಹೇಳಿದರು. ಬಡವ, ಶ್ರೀಮಂತ ಎನ್ನದೇ ಎಲ್ಲರೂ ಡ್ರಗ್ ಗೆ ಬಲಿ ಆಗಿದ್ದಾರೆ. ಸಮಾಜದ ಎಲ್ಲ ಸ್ಥರಗಳಲ್ಲೂ ಡ್ರಗ್ ವ್ಯಾಪಿಸುತ್ತಿದೆ. ನಾವು ವಾರ್ ಆನ್ ಡ್ರಗ್ ಮಾಡಿದೆವು, ಡ್ರಗ್ ರಾಜ್ಯದ ಒಳಗೆ ಬರುವುದನ್ನು ನಿಲ್ಲಿಸಿದೆವು ಎಂದು ಹೇಳಿದರು.
ಡಾರ್ಕ್ ವೆಬ್ ಹಾವಳಿ
ಡಾರ್ಕ್ ವೆಬ್ ಅಂತ ಇದೆ. ಅಲ್ಲಿ ಎಲ್ಲ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ. ಕರ್ನಾಟಕ ಪೊಲಿಸರು ದೇಶದಲ್ಲಿ ಮೊದಲ ಬಾರಿಗೆ ಭೇದಿಸಿದ್ದೇವೆ. ಅಲ್ಲಿ ನೋಡಿದಾಗ ನೆದರ್ ಲ್ಯಾಂಡ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಕಾನೂನು ಪ್ರಕಾರವೇ ನಡೆಯುತ್ತದೆ. ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ ಬರುತ್ತದೆ. ಅದಕ್ಕೆ ಸರಿಯಾದ ವಿಳಾಸ ಇರುವುದಿಲ್ಲ. ಒಂದು ತಿಂಗಳಾದ ಮೇಲೆ ನಮ್ಮದು ಅಂತಾರೆ. ಫೋಸ್ಟ್ ಆಫಿಸ್ ನವರು ಭಾಗಿ ಆಗಿರುತ್ತಾರೆ. ಇದು ಡಾರ್ಕ್ ವೆಬ್ ಭೇದಿಸಿದಾಗ ಗೊತ್ತಾಯಿತು. ನಾಲ್ಕು ಜನ ಪೋಸ್ಟ್ ಆಫಿಸಿನಲ್ಲಿ ಕೆಲಸ ಮಾಡುವವರು ಸಸ್ಪೆಂಡ್ ಆದರು. ಡ್ರಗ್ ಒಳಗೆ ಬರುವುದನ್ನು ತಡೆಬೇಕು. ಒಳಗೆ ಬಂದ ನಂತರ ತಡೆಯುವುದು ಕಷ್ಟ ಎಂದು ಹೇಳಿದರು.
ಕಾನೂನು ಬದಲಾಗಬೇಕು
ರಾಜ್ಯದಲ್ಲಿ ಡ್ರಗ್ ನಿಯಂತ್ರಣ ಕಾನೂನು ಬಿಗಿಗೊಳ್ಳಬೇಕು. ಡ್ರಗ್ ಎಷ್ಟೇ ಸೇವನೆ ಆದರೂ ಅಷ್ಟೇ. ಯುವಕರ ಭವಿಷ್ಯ, ಸಂಬಂಧ ಹಾಳು ಮಾಡುವಂತಹ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಡ್ರಗ್ ನ್ನು ತೊಡೆದು ಹಾಕಬೇಕು. ಈಗ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲು ಆಗುತ್ತಿಲ್ಲ. ಸ್ಟೇಶನ್ ಬೇಲ್ ಇದೆ. ಡ್ರಗ್ ನಮ್ಮ ಚಿಂತನೆಯನ್ನು ಹೈಜಾಕ್ ಮಾಡಲಿದೆ. ನಾವು ಏನು ಮಾಡುತ್ತಿದ್ದೇವೆ ಎನ್ನುವುದೇ ತಿಳಿಯದಂತೆ ಮಾಡುತ್ತದೆ. ದೇವರು ನಮಗೆ ಚಿಂತನಾ ಶಕ್ತಿ, ಬುದ್ದಿ , ಮನಸ್ಸು ಕೊಟ್ಟಿದ್ದಾನೆ. ಬೌದ್ಧಿಕ ಶ್ರೀಮಂತಿಕೆಗೆ ಡ್ರಗ್ ಮುಕ್ತ ಆಗಬೇಕು. ಸಕಾರಾತ್ಮಕ ಬದುಕು ನಡೆಸಿದರೆ ಡ್ರಗ್ ಏನೂ ಮಾಡಲಾಗದು. ನಕಾರಾತ್ಮಕ ಹಾದಿ ಹಿಡಿದರೆ ಸಂತೋಷದ ಭಾವನೆಯಲ್ಲಿ ಬದುಕುತ್ತೇವೆ. ಬಹಳಷ್ಟು ಜನರು ದುಖ ಮರೆಯಲು ಡ್ರಗ್ ತೆಗೆದುಕೊಳ್ಳುತ್ತಾರೆ. ಸಕಾರಾತ್ಮಕವಾಗಿ ಹೋದರೆ ಶಾಸ್ಬತವಾಗಿ ಸಂತೋಷದಲ್ಲಿ ಇರುತ್ತೀರಿ, ನಕಾರಾತ್ಮಕವಾಗಿ ಹೋದರೆ ಯಾವತ್ತು ಸಂತೋಷವಾಗಿ ಇರಲು ಸಾಧ್ಯವಿಲ್ಲ. ವ್ಯಕ್ತಿತ್ವ ಮರೆಯುವ ವಸ್ತುವನ್ನು ನಾವು ಏಕೆ ಮುಟ್ಟಬೇಕು. ಇದು ನಿಮ್ಮ ಜೀವನ ಮತ್ತು ವ್ಯಕ್ತಿತ್ವದಿಂದ ಪಲಾಯನ ಮಾಡುವುದು. ಹೀಗಾಗಿ ಅದನ್ನು ಮುಟ್ಟುವ ಅಗತ್ಯವಿಲ್ಲ ಎಂದರು.
ಆಂಟಿ ಡ್ರಗ್ ಚಳುವಳಿ ಆಗಬೇಕು
ಯುವಕರಲ್ಲಿ ಡ್ರಗ್ ವಿರೋಧಿ ಚಳುವಳಿ ಆಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ನಾನು ಗೃಹ ಸಚಿವನಾಗಿದ್ದಾಗ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸಂಸ್ಥೆಯ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದೆ. ಡ್ರಗ್ ಬರೀ ಅಮಲಲ್ಲ.. ಅದು ಹೀನಸ್ ಕ್ರೈಂ ಗೂ ಡ್ರಗ್ ಕಾರಣ. ಡ್ರಗ್ ವ್ಯವಹಾರದಲ್ಲಿ ಇರುವವರ ಮಕ್ಕಳಿಗೆ ಶಾಪ ತಟ್ಟಲಿದೆ ಎಂದರು.
ಹು-ಧಾ ಡ್ರಗ್ ಹೆಚ್ಚುತ್ತಿದೆ
ಹುಬ್ಬಳ್ಳಿ ಧಾರವಾಡದಲ್ಲಿ ಡ್ರಗ್ ಹೆಚ್ಚಳವಾಗುತ್ತಿದೆ. ಅದು ಜಿಲ್ಲೆ ಪ್ರವೇಶಿಸದಂತೆ ನೋಡಬೇಕು. ಗಡಿ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಡ್ರಗ್ ಬೆಳೆಯುತ್ತಾರೆ. ಈ ಬಗ್ಗೆ ತನಿಖೆ ಆಗಬೇಕು. ಯಾರೇ ಇರಲಿ ಅವರನ್ನು ಒದ್ದು ಒಳಗೆ ಹಾಕಿ. ಹುಬ್ಬಳ್ಳಿಧಾರವಾಡ ಕಮಿಷನರ್ ಶಶಿಕುಮಾರ್ ಸೇರಿ ನಾಲ್ಕೈದು ಜನ ದಕ್ಷ ಅಧಿಕಾರಿಗಳಿದ್ದಾರೆ ಎಂದರು.
ಕಾನೂನಿನ ದುರುಪಯೋಗ
ಬೆಂಗಳೂರಿನ ಕಲ್ಯಾಣ ನಗರದಲ್ಲಿ ಆಪ್ರಿಕನ್ ಜನ ಇದ್ದಾರೆ. ಡ್ರಗ್ ಬಹಳ ಇದೆ. ಅಲ್ಲಿ ಪೊಲೀಸ್ ರು ಹೋಗಲಾಗದು. ಅವರು ವಿದ್ಯಾಭ್ಯಾಸ ಮಾಡಲು ಇಲ್ಲಿ ಬಂದಿರುತ್ತಾರೆ. ಎರಡು ವರ್ಷ ಮುಗಿದ ನಂತರ ವಾಪಸ್ ಹೋಗಬೇಕಾಗುತ್ತದೆ. ಹೀಗಾಗಿ ಸಣ್ಣ ಕೇಸ್ ನಲ್ಲಿ ಭಾಗಿಯಾದರೆ ಇಲ್ಲಿಯೇ ಉಳಿಯಲು ಅವಕಾಶ ಆಗುತ್ತದೆ ಎಂದು ಆ ರೀತಿ ಮಾಡುತ್ತಾರೆ. ಒಂದು ಗಾದೆ ಮಾತಿದೆ. ಕಾನೂನು ಅಪರಾಧವನ್ನು ನಿಯಂತ್ರಣ ಮಾಡಬೇಕು. ಅಪರಾಧ ಕಾನೂನು ನಿಯಂತ್ರಣ ಮಾಡುತ್ತಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹುಬ್ಬಳ್ಳಿ – ಧಾರವಾಡ ಪೋಲಿಸ್ ಆಯುಕ್ತರಾದ ಎನ್.ಶಶಿಕುಮಾರ, ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಅಜಿತ್ ಪ್ರಸಾದ, ಪಿ.ಆರ್.ಹಂಚಿನಮನಿ, ಲಕ್ಷ್ಮಣ ಉಪ್ಪಾರ, ದಾದಾಪೀರ ಬಳ್ಳಾರಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಬಂಡು ಕುಲಕರ್ಣಿ, ಮುಖ್ಯ ವರದಿಗಾರ ವಿಜಯ ಹೂಗಾರ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.