ಬೆಂಗಳೂರು: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದಾಗಿ ಸಂಚಾರಕ್ಕೆ ತೊಡಕಾಗದಂತೆ, ರಜಾ ದಿನಗಳಲ್ಲಿಯೂ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀವ್ರಗೊಳಿಸಿದೆ. ಎಲ್ಲಾ ಎಂಟು ವಲಯಗಳಲ್ಲಿ ಈ ಕಾರ್ಯ ಚುರುಕಾಗಿ ನಡೆಯುತ್ತಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಶ್ರೀ ಡಿ.ಕೆ. ಶಿವಕುಮಾರ್ ರವರ ಆದೇಶ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ರವರ ನಿರ್ದೇಶನದಂತೆ, ರಸ್ತೆ ಗುಂಡಿಗಳ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಸಂಚಾರ ಪೊಲೀಸ್ ಇಲಾಖೆಯಿಂದ ಗುರುತಿಸಲಾದ 4,614 ಗುಂಡಿಗಳ ಪೈಕಿ 3,995 ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಉಳಿದವು ಜಲಮಂಡಳಿ, ಬೆಸ್ಕಾಂ, ಗೇಲ್, ಮೆಟ್ರೋ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳಿಗೆ ಸಂಬಂಧಿಸಿವೆ. ಬಿಬಿಎಂಪಿ ವ್ಯಾಪ್ತಿಯ 3,287 ಗುಂಡಿಗಳ ದುರಸ್ತಿಗೆ ವಿವಿಧ ಇಲಾಖೆಗಳೊಂದಿಗೆ ಸಹಕರಿಸಿ ಕಾಲಮಿತಿಯೊಳಗೆ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ರಜಾ ದಿನದಲ್ಲಿ ತೀವ್ರ ಕಾರ್ಯ:
ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲಿಯೂ ಎಂಟು ವಲಯಗಳಲ್ಲಿ ಗುಂಡಿಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಅಭಿಯಂತರರು ಸ್ಥಳದಲ್ಲಿದ್ದು, ಗುಣಮಟ್ಟದ ಕೆಲಸವನ್ನು ಖಚಿತಪಡಿಸುತ್ತಿದ್ದಾರೆ.
ರಾತ್ರಿಯಲ್ಲಿ ದುರಸ್ತಿ ಕಾರ್ಯ:
ಹೊರ ವರ್ತುಲ ರಸ್ತೆ, ಹೈಡೆನ್ಸಿಟಿ ಕಾರಿಡಾರ್ ಮತ್ತು ಪ್ರಮುಖ ರಸ್ತೆಗಳಾದ ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ, ಕನಕಪುರ ರಸ್ತೆ, ನಾಗರಭಾವಿ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ತ್ವರಿತ ದುರಸ್ತಿಗೆ ಸೂಚನೆ:
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ರವರು ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಳೆಗಾಲದಲ್ಲಿ ಕೋಲ್ಡ್ ಮಿಕ್ಸ್ ಮತ್ತು ಇಕೋಫಿಕ್ಸ್ ಬಳಸಿ, ಮಳೆರಹಿತ ಸಂದರ್ಭದಲ್ಲಿ ಹಾಟ್ ಮಿಕ್ಸ್ ಬಳಸಿ ದುರಸ್ತಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಈ ತ್ವರಿತ ಕ್ರಮಗಳಿಂದ ಬೆಂಗಳೂರಿನ ರಸ್ತೆಗಳ ಸಂಚಾರ ಸುಗಮಗೊಳಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.