ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳು ಮತ್ತು ರಸಗೊಬ್ಬರ ಪೂರೈಕೆಯಲ್ಲಿ ವಿಫಲವಾದ ಆಡಳಿತದ ವಿರುದ್ಧ ತುಮಕೂರಿನಲ್ಲಿ ಬಿಜೆಪಿ ಮತ್ತು ರೈತ ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು, ರೈತರ ಕಣ್ಣೀರು ಒರೆಸಲು ಈ ಹೋರಾಟವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯೇಂದ್ರ, ಕೃಷಿ ಸಚಿವರ ಅವಿವೇಕತನದಿಂದ ರೈತರು ರಸಗೊಬ್ಬರಕ್ಕಾಗಿ ಹೋರಾಡುವ ದುಸ್ಥಿತಿಗೆ ತಲುಪಿದ್ದಾರೆ ಎಂದು ಆರೋಪಿಸಿದರು. “ರೈತರ ಕಣ್ಣೀರು ಒರೆಸದ ಸರ್ಕಾರಕ್ಕೆ ರಾಜ್ಯದಲ್ಲಿ ಉಳಿಗಾಲವಿಲ್ಲ. ರೈತರನ್ನು ದುಸ್ಥಿತಿಗೆ ತಂದ ಕೃಷಿ ಸಚಿವರಿಗೂ ಒಳ್ಳೆಯದಾಗದು,” ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು. ಹವಾಮಾನ ಇಲಾಖೆಯಿಂದ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ, ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕಿಸಿದರು.
ವಿಜಯೇಂದ್ರ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಜ್ಯದ ಆಡಳಿತಕ್ಕಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮನೆ ಗೇಟ್ ಬಳಿ ಕಾಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. “ತಿಂಗಳಿಗೆ ನಾಲ್ಕು ಬಾರಿ ದೆಹಲಿಗೆ ಹೋಗಿ ಕುಳಿತರೆ ರಾಜ್ಯವನ್ನು ಆಳುವವರು ಯಾರು?” ಎಂದು ಪ್ರಶ್ನಿಸಿದರು. ಕೃಷಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿಯನ್ನು ಅರಿಯದಿರುವುದು ಮತ್ತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸದಿರುವುದು ರೈತರ ಸಂಕಷ್ಟಕ್ಕೆ ಕಾರಣ ಎಂದು ದೂಷಿಸಿದರು.
ರೈತ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರು ರೈತರ ಕಷ್ಟಕ್ಕೆ ಸ್ಪಂದಿಸಿದವರು ಎಂದು ಸ್ಮರಿಸಿದ ವಿಜಯೇಂದ್ರ, ಕೇಂದ್ರ ಸರ್ಕಾರ ಸಮರ್ಪಕವಾಗಿ ರಸಗೊಬ್ಬರ ಒದಗಿಸಿದರೂ ರಾಜ್ಯ ಸರ್ಕಾರ ರೈತರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂದು ಆಕ್ಷೇಪಿಸಿದರು. “ಇದು ರೈತ ವಿರೋಧಿ, ಹಗರಣಗಳ ಸರ್ಕಾರ. ಕೇಂದ್ರವನ್ನು ದೂಷಿಸುವ ಬದಲು ರೈತರ ಕುರಿತು ಜವಾಬ್ದಾರಿಯಿಂದ ಮಾತನಾಡಿ,” ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯು ಬಿ.ಜಿ.ಎಸ್. ವೃತ್ತದವರೆಗೆ ಮೆರವಣಿಗೆಯ ರೂಪದಲ್ಲಿ ನಡೆಯಿತು. ಸಾವಿರಾರು ರೈತರು, ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ, “ತೊಲಗಲಿ ತೊಲಗಲಿ, ಕಾಂಗ್ರೆಸ್ ತೊಲಗಲಿ; ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಶಾಸಕರಾದ ಸುರೇಶ್ ಗೌಡ, ಜಿ.ಬಿ. ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ, ಮಾಜಿ ಶಾಸಕ ಜಯರಾಮ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಂಬಿಕಾ ಹುಲಿನಾಯ್ಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.