ಬೆಂಗಳೂರು, ಮೇ 29: ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದ ಸರ್ಕಾರದ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾಲುವೆ ಒತ್ತುವರಿಗೆ ರಾಜಕಾರಣಿಗಳ ಕೈವಾಡವಿದೆ ಎಂದು ಆರೋಪಿಸಿರುವ ಅವರು, “ಒಂದು ದಿನ ತೆರಿಗೆ ಕಟ್ಟದಿದ್ದರೆ ಜನರ ಕುತ್ತಿಗೆ ಮೇಲೆ ಕುಳಿತುಕೊಳ್ಳುವ ಸರ್ಕಾರ, ರಾಜಕಾಲುವೆ ಒತ್ತುವರಿಗೆ ಕ್ರಮ ಕೈಗೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲವೇ?” ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ರಾಜಕಾಲುವೆ ಒತ್ತುವರಿಗೆ ಬಲಿಷ್ಠರ ಕೈವಾಡ
“ಮುಖ್ಯಮಂತ್ರಿಗಳು ರಾಜಕಾಲುವೆ ಒತ್ತುವರಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ದೊಡ್ಡ ಮಟ್ಟದ ಕಮರ್ಷಿಯಲ್ ಆಸ್ತಿಗಳಿಗಾಗಿ ಪ್ರಭಾವಿ ರಾಜಕಾರಣಿಗಳೇ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಇಂತಹ ಬಲಿಷ್ಠರಿಂದ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಲು ಸಿಎಂಗೆ ಸಾಧ್ಯವೇ?” ಎಂದು ನಿಖಿಲ್ ವಾಗ್ದಾಳಿ ನಡೆಸಿದರು. “ನಾವು ಭೇಟಿ ನೀಡಿದ ಕ್ಷೇತ್ರದಲ್ಲಿ, 4-5 ಬಾರಿ ಗೆದ್ದ ಶಾಸಕರು, ಮಂತ್ರಿಗಳೇ ಇದ್ದಾರೆ. ವಿಪರ್ಯಾಸವೆಂದರೆ, ಅವರ ಸ್ವಂತ ಕ್ಷೇತ್ರದಲ್ಲೇ ಅವ್ಯವಸ್ಥೆ ತಾಂಡವಾಡುತ್ತಿದೆ. ಮಧ್ಯಮ ವರ್ಗದ ಜನರು ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ. ರಾಜಕಾಲುವೆ ಮತ್ತು ಕೆರೆ-ಕಟ್ಟೆಗಳ ಒತ್ತುವರಿಯ ಬಗ್ಗೆ ಗಂಭೀರ ಚರ್ಚೆ ಆಗಬೇಕು,” ಎಂದರು.
ಕಾಟಾಚಾರದ ಭೇಟಿಗೆ ಟೀಕೆ
“ಸಿಎಂ ಮತ್ತು ಡಿಸಿಎಂ ಅವರ ಭೇಟಿ ಕೇವಲ ಕಾಟಾಚಾರಕ್ಕೆ ಸೀಮಿತವಾಗಿತ್ತು. ಡಿಸಿಎಂ ಲಘುವಾಗಿ ಮಾತನಾಡುತ್ತಾರೆ. ‘ಮಳೆ ಬಂದರೆ ಏನು ತೊಂದರೆ?’ ಎಂದು ಕೇಳುತ್ತಾರೆ. ಡಿಸಿಎಂ ಇರುವ ಏರಿಯಾದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಆಸ್ತಿಗಳಿವೆ. ಆದರೆ, ಇಲ್ಲಿ ಬದುಕುವವರು ಬಡವರು. ಹೊಸಪೇಟೆಯಲ್ಲಿ ಎರಡು ವರ್ಷಗಳಿಂದ ಸಾಧನಾ ಸಮಾವೇಶ ನಡೆಸುತ್ತಿದ್ದಾರೆ. ಆದರೆ, ಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು. “ಕಳೆದ 4-5 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರವಾಗಿದೆ. ಒಂದೇ ಮಳೆಗೆ ಬೆಂಗಳೂರು ಯುರೋಪಿನ ವೆನಿಸ್ ಸಿಟಿಯಂತಾಗಿದೆ. ಬೆಂಗಳೂರು ಮತ್ತು ವೆನಿಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ,” ಎಂದು ವ್ಯಂಗ್ಯವಾಡಿದರು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ
ಮಳೆಯಿಂದ ಹಾನಿಗೊಳಗಾದ ಜಯನಗರ, ಸಿಲ್ಕ್ ಬೋರ್ಡ್, ಮಹದೇವಪುರ, ಪಣತ್ತೂರು ರೈಲ್ವೆ ಅಂಡರ್‌ಪಾಸ್, ಹೆಣ್ಣೂರು, ಸಾಯಿ ಬಡಾವಣೆ, ಸಾಯಿ ಲೇಔಟ್, ಸರ್ವಜ್ಞ ನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಜೆಡಿಎಸ್ ತಂಡ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿತು. “ಬೆಂಗಳೂರು ರಾಜ್ಯದ ಜಿಡಿಪಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಇಲ್ಲಿಂದ ಜಾಸ್ತಿ ತೆರಿಗೆ ಬರುತ್ತಿದೆ. ಆದರೆ, ಮೂಲಭೂತ ಸೌಕರ್ಯಗಳೇ ಇಲ್ಲ. ಸಾಯಿ ಲೇಔಟ್‌ನಲ್ಲಿ 10 ವರ್ಷಗಳಿಂದ ಸಮಸ್ಯೆ ಇದೆ. ಜನರು ಮನೆ ಖಾಲಿ ಮಾಡಿದ್ದಾರೆ. ವಾಸಕ್ಕೆ ಯೋಗ್ಯವಲ್ಲದ ವಾತಾವರಣವಿದೆ. ಮಳೆಯಿಂದ ಕಾಯಿಲೆ ಭೀತಿಯೂ ಇದೆ. ಸಿಎಂ ಭೇಟಿಗೆ ಮುನ್ನ ಅಧಿಕಾರಿಗಳು ತರಾತುರಿಯಲ್ಲಿ ಕೆಲಸ ಮಾಡಿದ್ದಾರೆ,” ಎಂದು ತಿಳಿಸಿದರು.
ಜನರಿಗೆ ಧೈರ್ಯ ತುಂಬಿದ ನಿಖಿಲ್
“ಮಳೆಯಿಂದ ಉಂಟಾಗುವ ಸಮಸ್ಯೆ ಒಂದು ವಾರದ ಚರ್ಚೆಯಾಗಿರಬಾರದು. ಜೆಡಿಎಸ್ ಜನರ ಜೊತೆಗಿದೆ. ಒಂದು ತಂಡ ಕಟ್ಟಿಕೊಂಡು ಸಿಎಂ, ಡಿಸಿಎಂಗೆ ಮನವಿ ಸಲ್ಲಿಸೋಣ,” ಎಂದು ಜನರಿಗೆ ಧೈರ್ಯ ತುಂಬಿದರು.
ದೇವೇಗೌಡ, ಕುಮಾರಸ್ವಾಮಿಯವರ ಕೊಡುಗೆ
“ಜೆಡಿಎಸ್‌ನನ್ನು ಗ್ರಾಮೀಣ ಪಕ್ಷವೆಂದು ಬಿಂಬಿಸಲಾಗಿದೆ. ಆದರೆ, ದೇವೇಗೌಡರು ಎಂಜಿನಿಯರ್ ಆಗಿ ಬೆಂಗಳೂರು ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಾವೇರಿ ನೀರನ್ನು ಬೆಂಗಳೂರಿಗೆ ತಂದವರು ದೇವೇಗೌಡರು. ಕುಮಾರಸ್ವಾಮಿಯವರು 14 ತಿಂಗಳ ಸಿಎಂ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ,” ಎಂದು ನಿಖಿಲ್ ಹೇಳಿದರು.
ಗ್ರೇಟರ್ ಬೆಂಗಳೂರು ಯೋಜನೆಗೆ ಟೀಕೆ
“ಬೆಂಗಳೂರು ಅಭಿವೃದ್ಧಿಗೆ ಜೆಡಿಎಸ್ ಸಹಕಾರವಿದೆ. ಆದರೆ, ಈಗ ಮೂಲಭೂತ ಸೌಕರ್ಯ ಕುಸಿದಿದೆ. ಗ್ರೇಟರ್ ಬೆಂಗಳೂರು ಯೋಜನೆ ಕೇವಲ ಹಣ ಗಳಿಕೆಗೆ ರೂಪಿತವಾದ ತಂತ್ರವಷ್ಟೇ,” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣವೆಂದು ಬದಲಾಯಿಸುವ ವಿಚಾರಕ್ಕೆ, “ಜಿಲ್ಲೆಯ ಹೆಸರು ಬದಲಾಯಿಸಿದ ಕೂಡಲೇ ಅಭಿವೃದ್ಧಿಯಾಗುವುದಿಲ್ಲ. ರಾಜಕೀಯ ಲಾಭಕ್ಕಾಗಿ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಬಿಡದಿಯಲ್ಲಿ ಟೌನ್‌ಶಿಪ್ ರೂಪಿಸಲು ಯತ್ನಿಸುತ್ತಿದ್ದಾರೆ. ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ರೈತರ ಜೊತೆ ಚರ್ಚೆ ಮಾಡಿಲ್ಲ,” ಎಂದು ಆಕ್ಷೇಪಿಸಿದರು.
ಇಡಿ ದಾಳಿಗೆ ಪ್ರತಿಕ್ರಿಯೆ
ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ಇಡಿ ದಾಳಿಗೆ, “ಐಟಿ, ಇಡಿ ಸ್ವತಂತ್ರ ಸಂಸ್ಥೆಗಳು. ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿರುತ್ತವೆ. ತನಿಖೆಯಿಂದ ಎಲ್ಲ ವಿವರಗಳು ಬಯಲಾಗಲಿವೆ,” ಎಂದು ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ.ಬಿ., ಶಾಸಕರಾದ ಸಿ.ಎನ್. ಬಾಲಕೃಷ್ಣ, ಜಿ.ಡಿ. ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಜೊತೆಗಿದ್ದರು.