ಬೆಂಗಳೂರು: ರಾಜ್ಯಪಾಲರು ಹಾಗೂ ರಾಜಭವನಕ್ಕೆ ಅಪಮಾನ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಭಾರಿ ಪ್ರತಿಭಟನಾ ಪಾದಯಾತ್ರೆಯನ್ನು ಇಂದು ಆಯೋಜಿಸಿತು. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರೂ ಭಾಗವಹಿಸಿದ್ದರು.
ಶಾಸಕರ ಭವನದಿಂದ ವಿಧಾನಸೌಧದವರೆಗೆ ನಡೆದ ಈ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮತ್ತು ಪಕ್ಷದ ಹಲವು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುನ್ನಡೆ ನೀಡಿದರು.
ಪ್ರತಿಭಟನೆಯಲ್ಲಿ “ರಾಜ್ಯಪಾಲರ ಅಧಿಕಾರವನ್ನು ಹೈಕೋರ್ಟ್ ಎತ್ತಿಹಿಡಿದರೂ ಸಹಿಸದ ಕಾಂಗ್ರೆಸ್‌ಗೆ ಧಿಕ್ಕಾರ”, “ರಾಜ್ಯಪಾಲರ ಕುಲಾಧಿಪತಿ ಸ್ಥಾನಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ವಿರೋಧ”, “ರಾಜ್ಯಪಾಲರ ಸಾಂವಿಧಾನಿಕ ಹುದ್ದೆಗೆ ಕಳಂಕ ತಂದ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಹೋರಾಟ”, “ರಾಜ್ಯಪಾಲರ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಸರ್ಕಾರಕ್ಕೆ ತೀವ್ರ ವಿರೋಧ” ಎಂಬಂಥ ಸ್ಲೋಗನ್‌ಗಳೊಂದಿಗೆ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಸಾಂವಿಧಾನಿಕ ಹಕ್ಕುಗಳನ್ನು ಮೀರಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಕ್ರಮಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ನಾಯಕರು ಈ ಸಂದರ್ಭ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.