ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿ, ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರ ಪರಿಣಾಮವಾಗಿ, ರಾಜ್ಯದ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು, ನೌಕರರು ಮತ್ತು ಉದ್ಯೋಗಿಗಳು ಕೆಲಸಕ್ಕೆ ಹೋಗಲು, ಜನರು ಶುಭ ಸಮಾರಂಭಗಳಿಗೆ, ಸಾವು-ನೋವಿನ ಸಂದರ್ಭಗಳಿಗೆ ತೆರಳಲು ಬಸ್‌ಗಳಿಲ್ಲದೆ ಪರದಾಡುವಂತಾಗಿದೆ. ಈ ಸ್ಥಿತಿಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ.
“ರಾಜ್ಯದ ಖಜಾನೆಯನ್ನು ಖಾಲಿ ಮಾಡಿ, ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಲಾಗಿದೆ. ನೌಕರರ ಬಾಕಿ ವೇತನ, ವೇತನ ಹೆಚ್ಚಳ, ಹೊಸ ಬಸ್ ಖರೀದಿ, ಹಳೆಯ ಬಸ್‌ಗಳ ದುರಸ್ತಿಗೆ ಸರ್ಕಾರದ ಬಳಿ ಹಣವಿಲ್ಲ,” ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನಸಾಮಾನ್ಯರು ತೀವ್ರ ಕಷ್ಟದಲ್ಲಿದ್ದಾರೆ ಎಂದು ಆರೋಪಿಸಿರುವ ಅವರು, “ಸಿದ್ದರಾಮಯ್ಯನವರೇ, ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಿ,” ಎಂದು ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ಜನತೆ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡು, ಸಾರಿಗೆ ವ್ಯವಸ್ಥೆಯನ್ನು ಮೊದಲಿನಂತೆ ಸುಗಮಗೊಳಿಸುವಂತೆ ಜನರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.