ಬೆಂಗಳೂರು: ರಾಜ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಪ್ರವೇಶಿಸಿದ 137 ವಲಸೆಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಗೆ ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಮಾಹಿತಿ
ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಬಸನಗೌಡ ಆರ್. ಪಾಟೀಲ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಲಸೆಗಾರರು ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದರೆಂದು ತಿಳಿಸಿದ್ದಾರೆ.
ಭೂಮಾಫಿಯಾ ಪ್ರಕರಣಗಳು
ಬಿಜಾಪುರದಲ್ಲಿ 27 ಭೂಮಾಫಿಯಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 8 ಪ್ರಕರಣಗಳಲ್ಲಿ ದೋಷಾರೋಪಣಾ ಹಂತ ಮುಗಿದಿದೆ. 9 ಪ್ರಕರಣಗಳ ತನಿಖೆ ಮುಂದುವರಿದಿದೆ. ವಯೋವೃದ್ಧರನ್ನು ಗುರಿಯಾಗಿಟ್ಟು ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ಕಾಗದ ಪತ್ರಗಳನ್ನು ನಕಲು ಮಾಡಿರುವ ಪ್ರಕರಣಗಳೂ ಪತ್ತೆಯಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಪಡಿತರ ವಂಚನೆ ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡು ಕ್ರಮ
ಪಡಿತರ ಸರಬರಾಜಿನಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಲಾಗಿದ್ದು, ಇದರಲ್ಲೂ ಕಾನೂನು ಕ್ರಮ ಜರುಗಿಸಲಾಗಿದೆ. ಅಲ್ಲದೆ, ಅಕ್ರಮವಾಗಿ ಹೊಂದಿಸಲಾಗಿದ್ದ ಕಂಟ್ರಿ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎನ್‌ಐಎ ಘಟಕ ಸ್ಥಾಪನೆ ಪ್ರಸ್ತಾವನೆ
ಬಿಜಾಪುರದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಘಟಕ ಸ್ಥಾಪನೆಗಾಗಿ ಪ್ರಸ್ತಾಪ ಸಲ್ಲಿಸಲಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಪರಮೇಶ್ವರ್ ವಿಧಾನಸಭೆಗೆ ಮಾಹಿತಿ ನೀಡಿದರು.