ಬೆಂಗಳೂರು: ರಾಜ್ಯದಾದ್ಯಂತ ಮತದಾರರ ಪಟ್ಟಿಯ ಅಕ್ರಮಗಳನ್ನು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಮುಖಂಡರ ತಂಡವು ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಅನ್ಯಾಯದ ವಿರುದ್ಧ ಹೋರಾಡಿ, ಮತದಾನದ ಹಕ್ಕನ್ನು ರಕ್ಷಿಸಲು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಮೆರವಣಿಗೆಯ ಬದಲು ಕೆಲವೇ ನಾಯಕರು ಆಯೋಗದ ಕಚೇರಿಗೆ ಆಗಮಿಸಿದ್ದೇವೆ. ರಾಜ್ಯದಾದ್ಯಂತ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸಲು ಇಡೀ ರಾಜ್ಯದ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದೇವೆ” ಎಂದರು.
“ಮಹದೇವಪುರ ಮತ್ತು ಗಾಂಧಿನಗರದ ಮಾದರಿಗಳನ್ನು ಆಯೋಗಕ್ಕೆ ಸಲ್ಲಿಸಿಲ್ಲ. ರಾಹುಲ್ ಗಾಂಧಿ ಅವರು ನಿನ್ನೆಯ ಮಾಧ್ಯಮಗೋಷ್ಠಿಯಲ್ಲಿ ತೋರಿಸಿದ್ದು ಕೇವಲ ಉದಾಹರಣೆ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಈ ರೀತಿಯ ಅನ್ಯಾಯವಾಗಿದ್ದು, ಎಲ್ಲೆಡೆ ಸಮಗ್ರ ಪರಿಶೀಲನೆ ಅಗತ್ಯವಿದೆ. ಈ ಅಕ್ರಮದಲ್ಲಿ ಭಾಗಿಯಾದ ರಿಟರ್ನಿಂಗ್ ಅಧಿಕಾರಿಗಳು, ಬಿಎಲ್ಒ ಸೇರಿದಂತೆ ಯಾರೇ ಇದ್ದರೂ ಕಠಿಣ ಕ್ರಮಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಅವರು ವಿವರಿಸಿದರು.
“ಒಬ್ಬ ಮತದಾರನ ಹೆಸರನ್ನು ಐದು ಕಡೆ ಸೇರಿಸುವುದು, ವಿಳಾಸವಿಲ್ಲದೆ ಮತದಾರರ ಪಟ್ಟಿಗೆ ಸೇರ್ಪಡೆ, ಖಾಲಿ ನಿವೇಶನಗಳ ವಿಳಾಸದಲ್ಲಿ ನಕಲಿ ಮತಗಳ ಸೇರ್ಪಡೆ, ಮತಗಳನ್ನು ಪಕ್ಕದ ಬೂತ್‌ಗೆ ವರ್ಗಾಯಿಸುವ ಮೂಲಕ ಅಕ್ರಮ ಎಸಗಿರುವುದಕ್ಕೆ ದಾಖಲೆಗಳಿವೆ. ಈ ಬಗ್ಗೆ 8-10 ಅಂಶಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ. ಮತದಾರರ ಪಟ್ಟಿಯ ಡಿಜಿಟಲ್ ಮಾಹಿತಿಯನ್ನು ಒದಗಿಸುವಂತೆ ಕೋರಿದ್ದೇವೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಚುನಾವಣಾ ಆಯೋಗದ ಕ್ರಮಕ್ಕೆ ಸ್ವಾಗತ
“ಹೊಸದಾಗಿ ಆಯೋಗಕ್ಕೆ ಬಂದಿರುವ ಅಧಿಕಾರಿ ಅನ್ಬುಕುಮಾರ್ ಅವರು ಈಗಾಗಲೇ ಪರಿಶೀಲನೆ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಯಾವ ಕ್ಷೇತ್ರಗಳಲ್ಲಿ ಯಾವ ರೀತಿಯ ಅನ್ಯಾಯವಾಗಿದೆ ಮತ್ತು ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಆಯೋಗಕ್ಕೆ ತಿಳಿಸುತ್ತೇವೆ. ಈ ಹೋರಾಟ ಕೇವಲ ಕರ್ನಾಟಕ ಅಥವಾ ಮಹದೇವಪುರಕ್ಕೆ ಸೀಮಿತವಲ್ಲ, ಇದು ರಾಷ್ಟ್ರವ್ಯಾಪಿ ವಿಷಯ” ಎಂದು ಅವರು ಒತ್ತಿ ಹೇಳಿದರು.
“ನಮ್ಮ ಸರ್ಕಾರ, ನಮ್ಮ ಅಧಿಕಾರಿಗಳು ಎಂದು ಕೆಲವರು ಪ್ರಶ್ನಿಸಬಹುದು. ಆದರೆ ಚುನಾವಣಾ ಆಯೋಗವೇ ಎಲ್ಲವನ್ನೂ ನಿಯಂತ್ರಿಸುತ್ತದೆ. ಕಂಪ್ಯೂಟರ್‌ನಲ್ಲಿ ಒಬ್ಬರ ಹೆಸರು ಎಷ್ಟು ಕಡೆ ದಾಖಲಾಗಿದೆ ಎಂದು ಪರಿಶೀಲಿಸಬಹುದು. ಈ ಸೌಜನ್ಯ ಆಯೋಗದ ಅಧಿಕಾರಿಗಳಿಗೆ ಇರಬೇಕು. ಈ ವಿಷಯವನ್ನು ದೇಶಾದ್ಯಂತ ಚರ್ಚೆಗೆ ಒಡ್ಡಬೇಕಿದೆ” ಎಂದು ಶಿವಕುಮಾರ್ ಹೇಳಿದರು.
ರಾಹುಲ್ ಗಾಂಧಿ ಆರೋಪಕ್ಕೆ ಅಫಿಡವಿಟ್‌ನ ಅಗತ್ಯವಿಲ್ಲ
ರಾಹುಲ್ ಗಾಂಧಿ ಅವರಿಂದ ಅಫಿಡವಿಟ್ ಕೇಳಲಾಗಿದೆ ಎಂಬ ಆಯೋಗದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಯಾವ ಅಫಿಡವಿಟ್ ಬೇಕು? ರಾಹುಲ್ ಗಾಂಧಿ ಮತ್ತು ನಾನೇ ಅಫಿಡವಿಟ್. ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದ ನಂತರ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದೇವೆ. ನಾವು ಸುಳ್ಳು ಹೇಳಿದ್ದರೆ, ಕಾನೂನು ಕ್ರಮಕ್ಕೆ ಒಳಪಡಿಸಿ. ಆಯೋಗವು ರಾಹುಲ್ ಗಾಂಧಿ ಅವರ ಆರೋಪವನ್ನು ನಿರಾಕರಿಸಿದೆಯೇ? ಆರ್‌ಟಿಐ ಮೂಲಕ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ನಾವು ಈ ದೂರನ್ನು ಸಲ್ಲಿಸಿದ್ದೇವೆ” ಎಂದು ತಿರುಗೇಟು ನೀಡಿದರು.
ತಪ್ಪು ಎಲ್ಲೇ ಆಗಲಿ, ತಪ್ಪೇ
ಅರವಿಂದ ಲಿಂಬಾವಳಿ ಅವರ ಹೆಸರು ಚಾಮರಾಜಪೇಟೆ, ವರುಣಾ ಕ್ಷೇತ್ರಗಳಲ್ಲಿ ಡಬಲ್ ಎನ್‌ರೋಲ್ ಆಗಿರುವ ಬಗ್ಗೆ ಕೇಳಿದಾಗ, “ಕ್ಷೇತ್ರ ಯಾವುದೇ ಆಗಿರಲಿ, ತಪ್ಪು ತಪ್ಪೇ. ಸಂವಿಧಾನದ ಆಶಯಕ್ಕೆ ತಕ್ಕಂತೆ ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಈ ಅಕ್ರಮವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು” ಎಂದರು.
ಬಿಜೆಪಿ ಟೀಕೆಗೆ ತಿರುಗೇಟು
ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನಾವು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ. ನಮ್ಮ ಹೋರಾಟ ಚುನಾವಣಾ ಆಯೋಗದ ವಿರುದ್ಧ. ಆಯೋಗವು ಯಾವುದೇ ಪಕ್ಷದ ಧ್ವನಿಯಾಗಿ ಕೆಲಸ ಮಾಡಬಾರದು” ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಸುರೇಶ್ ಅವರ ಕ್ಷೇತ್ರದಲ್ಲಿ ಅಕ್ರಮಗಳ ಬಗ್ಗೆ ಕೇಳಿದಾಗ, “ಅವರು ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ದಾಖಲೆಗಳೊಂದಿಗೆ ಪತ್ರ ಬರೆದಿದ್ದರು. ಆದರೆ ಆಯೋಗ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ” ಎಂದರು.
ಇಂಡಿಯಾ ಟುಡೇಗೆ ಅಭಿನಂದನೆ
ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿಯಲ್ಲಿ ರಾಹುಲ್ ಗಾಂಧಿ ಅವರ ಆರೋಪ ಸಾಬೀತಾಗಿರುವ ಬಗ್ಗೆ ಕೇಳಿದಾಗ, “ಮೊದಲು ಇಂಡಿಯಾ ಟುಡೇಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ವ್ಯವಸ್ಥೆಯನ್ನು ಸರಿಪಡಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಶಿವಕುಮಾರ್ ಹೇಳಿದರು.
ಮತದಾನದ ಹಕ್ಕು ರಕ್ಷಣೆಗೆ ಹೋರಾಟ
ಕೆಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್‌ಗಳು ಬಂದ್ ಆಗಿರುವ ಬಗ್ಗೆ ಕೇಳಿದಾಗ, “ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಕಾಳಜಿಯ ವಿಷಯ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ, ಇಡೀ ಪ್ರಜಾಪ್ರಭುತ್ವದ ಸಮಸ್ಯೆ. ಮತದಾನದ ಹಕ್ಕನ್ನು ರಕ್ಷಿಸಲು ನಾವು ಹೋರಾಟ ನಡೆಸುತ್ತಿದ್ದೇವೆ” ಎಂದು ಶಿವಕುಮಾರ್ ಒತ್ತಿ ಹೇಳಿದರು.