ಬೆಂಗಳೂರು ದಕ್ಷಿಣ : ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚಿಸಲು ಆದೇಶ ಹೊರಡಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದ್ದಾರೆ. “ಈ ಸಂಘಗಳು ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುವೆ” ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ. ವೆಂಕಟಪ್ಪ ಅವರ ಕಣ್ವ ಫೌಂಡೇಶನ್‌ನಿಂದ ನಿರ್ಮಿತವಾದ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಶಿವಕುಮಾರ್ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಸ್ಥಾನಕ್ಕೆ ಏರಿದವರು ತಮ್ಮ ಶಾಲೆಯ ಅಭಿವೃದ್ಧಿಗೆ ನೆರವಾಗಬೇಕು. ಇಂತಹ ಸಂಘಟನೆಗಳಿಂದ ಶಾಲೆಗಳಿಗೆ ಬಲ ಬರುತ್ತದೆ. ಡಾ. ವೆಂಕಟಪ್ಪ ಅವರಂತಹ ಕಾರ್ಯಗಳು ಸಮಾಜದಲ್ಲಿ ಶಾಶ್ವತ ಹೆಸರನ್ನು ಉಳಿಸುತ್ತವೆ” ಎಂದರು.
“ಈ ಶಾಲೆಯ ಉದ್ಘಾಟನೆಯನ್ನು ಮಕ್ಕಳ ಕೈಯಿಂದ ಮಾಡಿಸಿದ್ದೇವೆ. ಡಾ. ವೆಂಕಟಪ್ಪ ಅವರ ದೂರದೃಷ್ಟಿಯಿಂದ ಈ ಜ್ಞಾನದ ಜ್ಯೋತಿ ಬೆಳಗಲಾಗಿದೆ. ‘ಶುಭಂ ಕರೋತಿ ಕಲ್ಯಾಣಂ’ ಎಂಬ ಶ್ಲೋಕದಂತೆ ಎಲ್ಲರಿಗೂ ಮಂಗಳವಾಗಲಿ. ಅಕ್ಷರವೇ ಬದುಕನ್ನು ಬೆಳಗುತ್ತದೆ. ಶಿಕ್ಷಕರು ಕೊಟ್ಟ ಜ್ಞಾನದಿಂದಲೇ ನಾವು ಬೆಳೆಯುತ್ತೇವೆ. ರಾಜ್ಯದಲ್ಲಿ 2,000 ಸಿಎಸ್‌ಆರ್ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಸಂಕಲ್ಪಿಸಿದೆ. ಶಿಕ್ಷಣ ನನ್ನ ನೆಚ್ಚಿನ ಕ್ಷೇತ್ರ. ನಾನು ಕೃಷಿಕನಾಗಿ ಹುಟ್ಟಿ, ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ರಾಜಕಾರಣಿಯಾಗಿದ್ದೇನೆ” ಎಂದು ಶಿವಕುಮಾರ್ ತಿಳಿಸಿದರು.
“ಸಿಎಸ್‌ಆರ್ ಯೋಜನೆಯಡಿ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ರೂಪುರೇಷೆ ಸಿದ್ಧಪಡಿಸಿದೆ. ಮನಮೋಹನ್ ಸಿಂಗ್ ಸರ್ಕಾರವು ಕಂಪನಿಗಳಿಗೆ 2% ಹಣವನ್ನು ಸಿಎಸ್‌ಆರ್‌ಗೆ ವಿನಿಯೋಗಿಸುವಂತೆ ಆದೇಶಿಸಿತ್ತು. ಡಾ. ವೆಂಕಟಪ್ಪ ಅವರು ತಂದೆ-ತಾಯಿ, ಗುರು, ದೇವರು ಮತ್ತು ಸಮಾಜದ ಋಣವನ್ನು ಧರ್ಮದಿಂದ ತೀರಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
“ಬೆಂಗಳೂರು ಮತ್ತು ಚನ್ನಪಟ್ಟಣದಂತಹ ನಗರಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೆಂಗಲ್ ಹನುಮಂತಯ್ಯ ಕಾಲದಲ್ಲಿ ಬೆಂಗಳೂರು ಜನಸಂಖ್ಯೆ 6 ಲಕ್ಷವಿತ್ತು, ಈಗ 1.4 ಕೋಟಿಗೆ ಏರಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿದರೆ ವಲಸೆಯನ್ನು ತಡೆಯಬಹುದು. ವಿದ್ಯಾರ್ಥಿಗಳು ಕೇವಲ ಉದ್ಯೋಗದ ಬಗ್ಗೆ ಯೋಚಿಸದೇ, ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ಸೃಷ್ಟಿಸಬೇಕು” ಎಂದರು.
“ಸಿಎಸ್‌ಆರ್ ನಿಧಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 24 ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕನಕಪುರದಲ್ಲಿ 9, ಚನ್ನಪಟ್ಟಣದಲ್ಲಿ 5, ಮಾಗಡಿಯಲ್ಲಿ 3, ರಾಮನಗರದಲ್ಲಿ 4, ಹಾರೋಹಳ್ಳಿಯಲ್ಲಿ 4 ಶಾಲೆಗಳು ಸೇರಿವೆ. ಇದು ಶಿಕ್ಷಣ ಕ್ರಾಂತಿಗೆ ಕೈಜೋಡಿಸಿದ ಕೆಲಸ” ಎಂದು ಶಿವಕುಮಾರ್ ತಿಳಿಸಿದರು.
ಮಾಧ್ಯಮ ಪ್ರತಿಕ್ರಿಯೆ:
ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಡಾ. ವೆಂಕಟಪ್ಪ ಅವರು 14 ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಿಸಿರುವುದು ಶ್ಲಾಘನೀಯ. ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನಕ್ಕೆ 8,000 ಕೋಟಿ ಮೀಸಲಿಡಲಾಗಿದೆ. ಎಲ್ಲ ಶಾಸಕರಿಗೂ ಈ ಅನುದಾನ ಸಿಗಲಿದೆ” ಎಂದರು.
ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ ಎಂಬ ಆರೋಪಕ್ಕೆ, “ಅನುದಾನ ವಿತರಣೆ ಆರಂಭವಾಗಿದೆ. ಅವರ ಕಾಲದಲ್ಲಿ ನನ್ನ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಕಿತ್ತುಕೊಂಡಿದ್ದರು. ನಾವು ಅಂತಹ ಕೆಲಸ ಮಾಡುವುದಿಲ್ಲ” ಎಂದು ಉತ್ತರಿಸಿದರು.
ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ಬಗ್ಗೆ, “ಯಾರೂ ಗಾಬರಿಯಾಗಬೇಕಿಲ್ಲ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದರು. ಮೈಸೂರಿನ ಸಾಧನಾ ಸಮಾವೇಶಕ್ಕೆ ತೆರಳುವುದಾಗಿಯೂ, ಜಿಎಸ್‌ಟಿ ನೋಟೀಸ್ ಬಗ್ಗೆ ಅಧ್ಯಯನದ ನಂತರ ಪ್ರತಿಕ್ರಿಯಿಸುವುದಾಗಿಯೂ ತಿಳಿಸಿದರು.