ಮೋದಿಯವರ ಆಡಳಿತದಲ್ಲಿ ರೇಲ್ವೆ ವಲಯಕ್ಕೆ ಭಾರೀ ಅಭಿವೃದ್ಧಿ: ಮಾಜಿ ಪ್ರಧಾನಿ ಶ್ಲಾಘನೆ
ನವದೆಹಲಿ: ಭಾರತೀಯ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ 2024ರ ರೈಲ್ವೆ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡ, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳನ್ನು ಮಾಡಿಕೊಂಡಿದೆ ಎಂದು ಶ್ಲಾಘಿಸಿದರು.
ರಾಜ್ಯಸಭೆಯಲ್ಲಿ ಸೋಮವಾರ ಮಸೂದೆ ಕುರಿತು ಮಾತನಾಡಿದ ದೇವೇಗೌಡರು, ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾದ ಮೈಸೂರು-ಹರಿಹರ ಮೀಟರ್ ಗೇಜ್ ರೈಲು ಮಾರ್ಗವನ್ನು ಸ್ಮರಿಸಿದರು. ತಮ್ಮ ಪುರಾತನ ರೈಲು ಪ್ರಯಾಣದ ಅನುಭವವನ್ನು ಹಂಚಿಕೊಂಡ ಅವರು, ಮುಂಬಯಿ-ಚೆನ್ನೈ ರೈಲು ಮಾರ್ಗಕ್ಕೆ ಹರಿಹರ-ದಾವಣಗೆರೆ-ಶೃಂಗೇರಿ-ಬೇಲೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದು ಪ್ರಸ್ತಾಪಿಸಿದರು.
ಹೊಸ ರೈಲು ಮಾರ್ಗಕ್ಕೆ ಮನವಿ
“ಈ ಮಾರ್ಗ ಕಾರ್ಯಗತಗೊಂಡರೆ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವುದಲ್ಲದೆ, ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರುವಂತೆ ನಾನು ಮನವಿ ಮಾಡುತ್ತೇನೆ,” ಎಂದು ದೇವೇಗೌಡರು ಹೇಳಿದರು.
ಕಳೆದ 10 ವರ್ಷಗಳಲ್ಲಿ ಭಾರತೀಯ ರೈಲ್ವೆ ಜಾಲದಲ್ಲಿ ಅಪಾರ ಬೆಳವಣಿಗೆ ಕಂಡುಬಂದಿದ್ದು, ಈ ಪ್ರಗತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಮುಖ ಕಾರಣಕರ್ತರು ಎಂದು ಅವರು ಅಭಿಪ್ರಾಯಪಟ್ಟರು. “ನಾನು ಇವರನ್ನು ಅಭಿನಂದಿಸಿದರೆ ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ನಾನು ಪ್ರಧಾನಿಯಾಗಿದ್ದಾಗ ರೇಲ್ವೆ ಕ್ಷೇತ್ರದಲ್ಲಿ ಮಾಡಿದ್ದೇನೆ, ಇಂದು ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ನನಗೆ ಚೆನ್ನಾಗಿ ತಿಳಿದಿದೆ,” ಎಂದೂ ಅವರು ಹೇಳಿದರು.
ರೇಲ್ವೆ ಸಚಿವರ ಶ್ಲಾಘನೆ
ರೇಲ್ವೆ ತಿದ್ದುಪಡಿ ಮಸೂದೆ ಅತ್ಯಂತ ಮಹತ್ವದ್ದಾಗಿದ್ದು, ಇದಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದ ಮಾಜಿ ಪ್ರಧಾನಿಗಳು, ಸದರ ಮಸೂದೆ ಕುರಿತಂತೆ ಸದನದಲ್ಲಿ ಹಾಜರಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡು, “ನೀವು ಅತ್ಯಂತ ಪ್ರಾಮಾಣಿಕ ರೇಲ್ವೆ ಸಚಿವರು” ಎಂದು ಶ್ಲಾಘಿಸಿದರು.