ಬೆಂಗಳೂರು: ರಾಜ್ಯದಲ್ಲಿ Congress ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಇಂದು ಪ್ರಾರಂಭವಾದ ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಿ ಜನರ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು. “ಈ ಸರಕಾರಕ್ಕೆ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ. ಜನರ ಹಿತವನ್ನು ಮರೆತು ಇದು ತುಘಲಕ್ ದರ್ಬಾರ್ ನಡಿಸುತ್ತಿದೆ. ನಾವು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತೇವೆ” ಎಂದು ಅವರು ಹೇಳಿದರು.
ಬೆಲೆ ಏರಿಕೆಯಿಂದ ಜನರಿಗೆ ಉಸಿರುಗಟ್ಟುವ ಪರಿಸ್ಥಿತಿ
“ಸರ್ಕಾರದ ವೈಫಲ್ಯಗಳ ವಿರುದ್ಧ ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸಬೇಕು. ಜನರ ಕೋಪವನ್ನು ಸರಕಾರದ ವಿರುದ್ಧ ತಿರುಗಿಸಬೇಕು. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ” ಎಂದು ಯಡಿಯೂರಪ್ಪ ಹೇಳಿದರು.
ಪ್ರಜಾಪ್ರಭುತ್ವದ ಹಿತವಿರೋಧಿ ನಿರ್ಧಾರಗಳು
“ಈ ಸರಕಾರ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದೆ, ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ಜನರ ಹಿತಪಾಲನೆಯಲ್ಲಿ ವಿಫಲವಾಗಿದೆ. ಜನಪ್ರತಿನಿಧಿಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿರಬಾರದು ಎಂಬುದು ನಮ್ಮ ಎಲ್ಲರ ಕರ್ತವ್ಯ” ಎಂದು ಅವರು ಹೇಳಿದರು.
“ರಾಜ್ಯಾದ್ಯಂತ ಮಹಿಳೆಯರು, ಕಿರಿಯರು, ಹಿರಿಯರು ಸೇರಿದಂತೆ ಸಾವಿರಾರು ಜನರು ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರಕಾರವನ್ನು ಪಾಠ ಕಲಿಸಲು ಜನರು ಸಿದ್ಧರಾಗಿದ್ದಾರೆ” ಎಂದು ಯಡಿಯೂರಪ್ಪ ಹೇಳಿದರು.












