ತಪ್ಪಿಲ್ಲದಿದ್ದರೆ ಮೂರು ದಿನದ ಅಧಿವೇಶನ ಕರೆಯಲಿ
ಬೆಂಗಳೂರು: ಕಾಲ್ತುಳಿತ ದುರಂತದ ಕುರಿತು ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿರುವುದು ರಾಜ್ಯ ಸರ್ಕಾರದ ಮೇಲಿನ ಅಪನಂಬಿಕೆಯನ್ನು ತೋರಿಸುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲದಿದ್ದರೆ, ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿತ್ತು. ಆದರೆ, ಹೈಕೋರ್ಟ್ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿರುವುದು ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುತ್ತದೆ. “ಕೋರ್ಟ್‌ಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದೇ ಇದರಿಂದ ಸ್ಪಷ್ಟವಾಗುತ್ತದೆ. ಮೃತರ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ತನಿಖೆಗೆ ನೀಡಬಹುದಿತ್ತು. ಆದರೆ, ಜಿಲ್ಲಾಧಿಕಾರಿ, ನಿವೃತ್ತ ನ್ಯಾಯಾಧೀಶರು, ಎಸ್‌ಐಟಿ ತನಿಖೆ ಎಂದು ಹೇಳುತ್ತಾ ಯಾವುದೇ ಸ್ಪಷ್ಟತೆ ತೋರಿಲ್ಲ,” ಎಂದು ಆರ್.ಅಶೋಕ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಕ್ರಿಕೆಟಿಗರ ಜೊತೆ ಫೋಟೋ ಶೂಟ್‌ನಲ್ಲಿ ಭಾಗಿಯಾಗಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ ಅವರು, ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿತ್ತು. “ಅಂತಹ ಆಹ್ವಾನ ನೀಡದೇ ಇದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ. ಬಿಜೆಪಿ ಪ್ರತಿಭಟನೆ ವೇಳೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಎರಡು ಲಕ್ಷ ಜನರನ್ನು ನಿಯಂತ್ರಿಸಲು ಸಾಕಷ್ಟು ಪೊಲೀಸರನ್ನು ವ್ಯವಸ್ಥೆ ಮಾಡದಿರುವುದು ಸರ್ಕಾರದ ವೈಫಲ್ಯ,” ಎಂದು ದೂರಿದರು.
ಈ ಪ್ರಕರಣದ ಕುರಿತು ಚರ್ಚಿಸಲು ಮೂರು ದಿನಗಳ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿರುವ ಆರ್.ಅಶೋಕ, “ಸರ್ಕಾರಕ್ಕೆ ತಪ್ಪಿಲ್ಲ ಎಂದಾದರೆ, ಯಾರ ತಪ್ಪು ಎಂದು ಸ್ಪಷ್ಟವಾಗಿ ತಿಳಿಸಲಿ,” ಎಂದು ಒತ್ತಾಯಿಸಿದರು. “ಅಕ್ಟೋಬರ್‌ನಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲ ಶಾಸಕರು ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. 2028ರಲ್ಲಿ ಇವರು ಅಧಿಕಾರಕ್ಕೆ ಬರುವುದು ಅಸಾಧ್ಯ,” ಎಂದು ವ್ಯಂಗ್ಯವಾಡಿದ ಅವರು, ಡಿ.ಕೆ.ಶಿವಕುಮಾರ್ ಚಿಂತೆಯಲ್ಲಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯು ಈಗಾಗಲೇ ಎಲ್ಲ ಬಗೆಯ ಹೋರಾಟಗಳನ್ನು ನಡೆಸಿದ್ದು, ಮುಂದೆಯೂ ಹೋರಾಟ ಮುಂದುವರಿಸಲಿದೆ ಎಂದು ಆರ್.ಅಶೋಕ ತಿಳಿಸಿದರು.












