ಬೆಂಗಳೂರು: ರಾಜ್ಯ ಸರ್ಕಾರ ಎಲ್ಲ ನಿಗಮಗಳನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಬಿಸಿ (ಇತರ ಹಿಂದುಳಿದ ವರ್ಗಗಳು) ಕೇವಲ ಭಾಷಣದ ವಿಷಯವಾಗಿದ್ದು, ಅವರ ಕಲ್ಯಾಣ ಮತ್ತು ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಟೀಕಿಸಿದರು.
“ಒಬಿಸಿ ಸಮುದಾಯದ ಕಲ್ಯಾಣಕ್ಕಾಗಿ ಎಲ್ಲ ನಿಗಮಗಳಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ಈ ಕುರಿತು ಒಬಿಸಿ ಮೋರ್ಚಾ ಸಭೆಯಲ್ಲಿ ಚರ್ಚಿಸಲಾಗಿದೆ,” ಎಂದು ಸುನೀಲ್ ಕುಮಾರ್ ಹೇಳಿದರು.
ಅವರು, ಸಿದ್ದರಾಮಯ್ಯ ಅವರೇ ರಚಿಸಿದ ಕಾಂತರಾಜು ಆಯೋಗದ ವರದಿಯನ್ನು ಜಾರಿಗೊಳಿಸದೆ ಕಾಲಹರಣ ಮಾಡಲಾಗಿದೆ ಎಂದು ಆಕ್ಷೇಪಿಸಿದರು. “165 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾದ ಈ ವರದಿಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿ, ಕಸದ ಬುಟ್ಟಿಗೆ ಎಸೆಯಲಾಗಿದೆ. ಈ ವರದಿಯ ಮುಖ್ಯಾಂಶಗಳನ್ನು ಚರ್ಚೆಗೆ ಬಿಡುಗಡೆ ಮಾಡಬೇಕು,” ಎಂದು ಒತ್ತಾಯಿಸಿದರು.
ಕಾಂಗ್ರೆಸ್ಗೆ ಜಾತಿ ಗಣತಿಯಲ್ಲಿ ಆಸಕ್ತಿಯಿಲ್ಲ:
ಕೇಂದ್ರದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಜಾತಿ ಗಣತಿಗೆ ಎಂದಿಗೂ ಬೆಂಬಲ ನೀಡಿಲ್ಲ ಎಂದು ಸುನೀಲ್ ಕುಮಾರ್ ದೂರಿದರು. “1931ರ ಬಳಿಕ ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಜಾತಿ ಗಣತಿಗೆ ಸಹಕರಿಸದೆ, ಪ್ರತ್ಯೇಕ ಗಣತಿಯ ಕುರಿತು ಮಾತನಾಡುತ್ತಿರುವುದು ಗೊಂದಲ ಸೃಷ್ಟಿಸುತ್ತದೆ,” ಎಂದರು. ಕೇಂದ್ರದ ಜಾತಿ ಗಣತಿಗೆ ರಾಜ್ಯ ಸರ್ಕಾರ ಕೈ ಜೋಡಿಸಬೇಕು ಎಂದು ಸಭೆಯಲ್ಲಿ ಒಮ್ಮತವಾಯಿತು ಎಂದು ತಿಳಿಸಿದರು.












