ಹುಕ್ಕೇರಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ತಾಲೂಕಿನ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿಯೂ ಕೃಷ್ಣಮೃಗಗಳು ಸಾಯುತ್ತಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, “ವೈದ್ಯರ ತಂಡ ಮತ್ತು ವಿಜ್ಞಾನಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಅಧ್ಯಯನ ನಡೆಸುತ್ತಿದ್ದಾರೆ. ಅವರ ವರದಿ ಬಂದ ಬಳಿಕ ಮಾತ್ರ ನಿಖರ ಕಾರಣ ಗೊತ್ತಾಗಲಿದೆ” ಎಂದು ಹೇಳಿದ್ದಾರೆ.
ವೈರಸ್ ಹರಡುವ ಭೀತಿ ಕುರಿತು ಮಾತನಾಡಿದ ಅವರು, “ಹುಲ್ಲು ತಿನ್ನುವ ಪ್ರಾಣಿಗಳಿಗೆ (ಹರ್ಬಿವೋರ್ಸ್) ಈ ರೋಗ ಹರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಮಾಂಸಾಹಾರಿ ಪ್ರಾಣಿಗಳಿಗೆ ಹರಡುವುದಿಲ್ಲ ಎಂಬ ಮಾಹಿತಿ ಲಭ್ಯವಿದೆ. ವರದಿ ಬರುವವರೆಗೂ ಕಾಯಬೇಕು” ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಯೊಂದಿಗೆ, “ನಮಗೆ ಯಾವುದೇ ಮಾಹಿತಿ ಇಲ್ಲ. ನಾನು ಸಹ ಮಾಧ್ಯಮಗಳಲ್ಲೇ ನೋಡಿದ್ದೇನೆ. ಈ ಬದಲಾವಣೆಯ ವಿಚಾರವನ್ನು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ. ಕಾದು ನೋಡೋಣ” ಎಂದರು.
ಡಿ.ಕೆ. ಶಿವಕುಮಾರ್ ಅವರು “ಕೆಪಿಸಿಸಿ ಬಿಟ್ಟುಕೊಡಲ್ಲ” ಎಂದಿದ್ದಾರೆ ಎಂಬ ಪ್ರಶ್ನೆಗೆ ನಗುಮುಖದಿಂದ ಉತ್ತರಿಸಿದ ಸಚಿವರು, “ನಾವು ಯಾರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ ಎಂದು ಹೇಳಿಲ್ಲ. ಅವರೇ ಹೇಳ್ತಾರೆ, ಅವರೇ ಇದ್ದಾರೆ. ಸದ್ಯಕ್ಕೆ ನಾನು ಆಕಾಂಕ್ಷಿಯಲ್ಲ. ಆದರೆ ಅವಕಾಶ ಬಂದರೆ ನೋಡೋಣ” ಎಂದು ತಮಾಷೆಯ ಧ್ವನಿಯಲ್ಲಿ ಹೇಳಿದರು.












