ಬೆಂಗಳೂರು, ರಾಮನಗರ ಜಿಲ್ಲೆಯನ್ನು ಇನ್ನುಮುಂದೆ ‘ಬೆಂಗಳೂರು ದಕ್ಷಿಣ’ ಎಂದು ಕರೆಯಲಾಗುವುದು. ಈ ಕುರಿತು ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣಕ್ಕೆ ಅಧಿಕೃತ ಒಪ್ಪಿಗೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, “ಜಿಲ್ಲಾ ಕೇಂದ್ರ ರಾಮನಗರವಾಗಿಯೇ ಮುಂದುವರಿಯುತ್ತದೆ. ಆದರೆ ಆಡಳಿತಾತ್ಮಕ ನಿರ್ವಹಣೆಯ ಸುಗಮತೆಗಾಗಿ ಜಿಲ್ಲೆ ಹೆಸರು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ತಿಳಿಸಿದರು.
ಬಿಡಿಎ ನಿವೇಶನದಾರರಿಗೆ ಬಡ್ಡಿ ವಿನಾಯಿತಿ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿವೇಶನ ಹೊಂದಿರುವ ದೇವಸ್ಥಾನಗಳು, ಸಂಘ ಸಂಸ್ಥೆಗಳಿಗೆ ಒನ್ ಟೈಮ್ ಇಂಟ್ರೆಸ್ಟ್ ಬೆನಿಫಿಟ್ (OTIS) ಯೋಜನೆಯಡಿಯಲ್ಲಿ ಬಾಕಿ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ. 125 ದಿನಗಳೊಳಗೆ ಬಾಕಿ ತೆರಿಗೆ ಪಾವತಿಸಿದರೆ ಬಡ್ಡಿ ವಿನಾಯಿತಿ ಲಭಿಸುತ್ತದೆ ಎಂದು ಅವರು ಹೇಳಿದರು.
ಮೆಟ್ರೋ ಹಂತ-3ಕ್ಕೆ ಅನುಮತಿ:
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೂರನೇ ಹಂತಕ್ಕೆ ₹40,424 ಕೋಟಿಯ ಅನುದಾನವನ್ನು ಸಚಿವ ಸಂಪುಟ ಸಭೆ ಅಂಗೀಕರಿಸಿದೆ. ಟೆಂಡರ್ ಪ್ರಕ್ರಿಯೆ ಜಾಗತಿಕ tender ಆಗಿರಲಿದ್ದು, ಹೈಬ್ರಿಡ್ ಮಾದರಿಯಲ್ಲಿ ಟನಲ್ ನಿರ್ಮಾಣ ಕುರಿತು ತಾಂತ್ರಿಕ ಚರ್ಚೆಗಳ ನಂತರ ತೀರ್ಮಾನ ಮಾಡಲಾಗುವುದು ಎಂದರು.
ಕಸ ವಿಲೇವಾರಿಗೆ 33 ಪ್ಯಾಕೇಜ್: ₹4,790 ಕೋಟಿ ವೆಚ್ಚ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಈ ಹಿಂದೆ 98 ಪ್ಯಾಕೇಜ್‌ಗಳ ಟೆಂಡರ್ ಕರೆಯಲಾಗಿತ್ತು. ನ್ಯಾಯಾಲಯದ ತೀರ್ಪಿನ ಬಳಿಕ ಹೊಸ ರೂಪದಲ್ಲಿ 33 ಪ್ಯಾಕೇಜ್‌ಗಳ ಮೂಲಕ ನಿರ್ವಹಣೆಗೆ ತೀರ್ಮಾನಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಂದು ಪ್ಯಾಕೇಜ್ ನೀಡಲಾಗುತ್ತಿದ್ದು, ದೊಡ್ಡ ಕ್ಷೇತ್ರಗಳಿಗೆ ಎರಡು ಪ್ಯಾಕೇಜ್ ನೀಡಲಾಗುವುದು. ಈ ಯೋಜನೆ 7 ವರ್ಷಗಳ ಅವಧಿಗೆ ₹4,790 ಕೋಟಿ ವೆಚ್ಚದಲ್ಲಿ ಜಾರಿಯಾಗಲಿದೆ.
ಕಾನೂನು ಚೌಕಟ್ಟಿನಡಿ ಮರುನಾಮಕರಣ:
ಜಿಲ್ಲೆ ಮರುನಾಮಕರಣದ ಹಿನ್ನೆಲೆಯ ಬಗ್ಗೆ ಮಾತನಾಡಿದ ಡಿಸಿಎಂ, “ಇದು ರಾಜ್ಯದ ಹಕ್ಕು ಮತ್ತು ಕಾನೂನುಬದ್ಧ ತೀರ್ಮಾನ. ಯಾವುದೇ ಆರ್ಥಿಕ ಭಾರವಿಲ್ಲ. ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಮಾತ್ರವಲ್ಲದೇ, ಕೆಲವು ರಾಜಕೀಯ ಪಕ್ಷಗಳು ಈ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಇಡಿ ದಾಳಿ – ಸ್ಪಷ್ಟನೆ:
ಪರಮೇಶ್ವರ್ ಅವರ ಮೇಲಿನ ಇಡಿ ದಾಳಿಯ ಕುರಿತು ತನ್ನ ಹೇಳಿಕೆಗೆ ವಿವಾದ ಏರ್ಪಟ್ಟ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ನಾನು ಅವರ ಬಳಿ ವಿಚಾರಿಸಿ ನೀಡಿದ ಉತ್ತರವನ್ನು ಮಾತ್ರ ಹಂಚಿಕೊಂಡಿದ್ದೇನೆ. ವಿವಾದ ಎದ್ದಂತಿಲ್ಲ. ನಾನೇನು ತಪ್ಪೊಪ್ಪಿಗೆ ಹೇಳಿಲ್ಲ” ಎಂದು ಹೇಳಿದರು.
ರನ್ಯಾ ರಾವ್ ಪ್ರಕರಣ:
ಸ್ಮಗ್ಲಿಂಗ್ ಪ್ರಕರಣದಲ್ಲಿ ಆರೋಪಿಯಾಗಿರುವ ರನ್ಯಾ ರಾವ್ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, “ಅವರು ಯಾವುದೇ ಹಗರಣದಲ್ಲಿ ಒಳಪಟ್ಟು ಇದ್ದರೆ ಅದು ಅವರ ವೈಯಕ್ತಿಕ ವಿಚಾರ. ಪಕ್ಷ ಅಥವಾ ಸರ್ಕಾರವು ಬೆಂಬಲ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಮಳೆ ಮತ್ತು ರಸ್ತೆಗುಂಡಿ ಸಮಸ್ಯೆ:
ನಗರದಲ್ಲಿ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, “ಮಳೆ ನಿಂತ ಬಳಿಕ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ತಿದ್ದುಪಡಿ ಸೇರಿದಂತೆ ಸ್ವಚ್ಛತೆ ಸಂಬಂಧಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಕಸ ವಿಲೇವಾರಿಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಹೇಳಿದರು.