ಬೆಂಗಳೂರು:ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು (ಓ.ಪಿ.ಎಸ್) ಜಾರಿ ಮಾಡುವ ಸಾಧ್ಯತೆಗಳ ಕುರಿತು ಸರ್ಕಾರ ಅಗತ್ಯ ಕ್ರಮವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಪರವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಓಪಿಎಸ್ ಜಾರಿ ಮಾಡಲು ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಲು ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 11-12-2018 ಮತ್ತು 01-03-2023 ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ: 16-08-2024ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಪುನರ್ ರಚಿಸಿ ಆದೇಶಿಸಲಾಗಿದೆ. ಸಮಿತಿಗೆ ಹಿಂದಿನ ಡಿಪೈನ್ಡ್ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಸದರಿ ಸಮಿತಿಯು ಈಗಾಗಲೇ ಎರಡು ಸಭೆಗಳನ್ನು ಸಹ ನಡೆಸಿದೆ. ವರದಿಯನ್ನು ಸಲ್ಲಿಸಲು ಸಮಿತಿಗೆ ಯಾವುದೇ ಕಾಲಮಿತಿಯನ್ನು ನಿಗಧಿಪಡಿಸಿರುವುದಿಲ್ಲ. ಸಮಿತಿಯು ವರದಿಯನ್ನು ಸಲ್ಲಿದ ಕೂಡಲೇ ವರದಿಯನ್ನು ಪರಿಶೀಲಸಿ ಆದಷ್ಟು ಬೇಗ ಓ.ಪಿ.ಎಸ್. ಜಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.