ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿರುದ್ಧ ಪಾದಯಾತ್ರೆ ನಡೆಸಲು ಯೋಜಿಸಿರುವುದು ರಾಜಕೀಯ ವಾತಾವರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಪಾದಯಾತ್ರೆಯ ಹಿಂದಿನ ನಿಜವಾದ ಉದ್ದೇಶವೇನು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಮೂರು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೋಲಿನ ಸುಂಟರಗಾಲಿಯಲ್ಲಿ ಮುಳುಗಿಸಿದ ರಾಹುಲ್ ಗಾಂಧಿಯವರ ಈ ಹೊಸ ಯಾತ್ರೆ, ಚುನಾವಣಾ ಸೋಲಿನ ಭೀತಿಯಿಂದ ತಮ್ಮ ವೈಫಲ್ಯವನ್ನು ಮರೆಮಾಚಲು ಮಾಡುತ್ತಿರುವ ಕಸರತ್ತು ಎಂಬ ಆರೋಪ ಕೇಳಿಬರುತ್ತಿದೆ.
ಹರಿಯಾಣ, ಮಹಾರಾಷ್ಟ್ರ, ದೆಹಲಿ ಮತ್ತು ಈಗ ಬಿಹಾರದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ, ರಾಹುಲ್ ಗಾಂಧಿಯವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಆದರೆ, ಕರ್ನಾಟಕದ ಜನತೆಯ ಸಂಕಷ್ಟಗಳಿಗೆ ಈಗಲಾದರೂ ಸ್ಪಂದಿಸಲು ಬಂದಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಕಳೆದ 24 ತಿಂಗಳಲ್ಲಿ ಕರ್ನಾಟಕದಲ್ಲಿ 2,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಗಳಿಂದ 500ಕ್ಕೂ ಹೆಚ್ಚು ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳು ಮೃತಪಟ್ಟಿದ್ದರೂ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 50ಕ್ಕೂ ಹೆಚ್ಚು ಬಡವರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರಿ ಎಡವಟ್ಟಿನಿಂದ 11 ಅಮಾಯಕ ಯುವಕರು ಸಾವನ್ನಪ್ಪಿದ್ದರೂ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ಈಗ ಬಿಹಾರ ಚುನಾವಣೆಯ ಸೋಲಿನ ಭಯದಿಂದ ಕರ್ನಾಟಕದಲ್ಲಿ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂಬ ಟೀಕೆ ಜೋರಾಗಿದೆ.
ರಾಹುಲ್ ಗಾಂಧಿಯವರ ಈ ಪಾದಯಾತ್ರೆಯನ್ನು ಕಾಂಗ್ರೆಸ್ ಪಕ್ಷದ ಅಸಾಮರ್ಥ್ಯ ಮತ್ತು ವೈಫಲ್ಯಕ್ಕೆ ಕುಂಟು ನೆಪವಾಗಿ ಕಾಣುವ ಕರ್ನಾಟಕದ ಜನತೆ, “ಈಗ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸುತ್ತಿದ್ದಾರೆ. ಈ ಪಾದಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಯಾವ ಲಾಭ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.