ವೈಫಲ್ಯ ಮರೆಮಾಚಲು ಲೋಕತಂತ್ರ ನಿಷ್ಕ್ರಿಯಗೊಳಿಸುವ ಯತ್ನ: ಮಾಜಿ ಸಿಎಂ ಆರೋಪ
ಬೆಂಗಳೂರು : ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಲೋಕತಂತ್ರವನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸದೇ ರಾಹುಲ್ ಗಾಂಧಿ “ಹಿಟ್ ಆಂಡ್ ರನ್” ತಂತ್ರ ಅನುಸರಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, “ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗದ ಕರ್ತವ್ಯ, ಜನಪ್ರತಿನಿಧಿ ಕಾಯ್ದೆಯ ಬಗ್ಗೆ ತಿಳಿದಿರಲಿಕ್ಕಿಲ್ಲ ಅಥವಾ ತಿಳಿದಿದ್ದೂ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಲೋಕತಂತ್ರವನ್ನು ದುರ್ಬಲಗೊಳಿಸುವ ಅಪಾಯಕಾರಿ ಆಟವಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಸೋಲಿನಿಂದ ಹತಾಶೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿರುವುದರಿಂದ ರಾಹುಲ್ ಗಾಂಧಿಯ ನಾಯಕತ್ವದ ಮೇಲೆ ಪಕ್ಷದೊಳಗೆ ಅಸಮಾಧಾನವಿದೆ. ಇದನ್ನು ಮರೆಮಾಚಲು ಅವರು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು. “ರಾಹುಲ್ ಗಾಂಧಿಯವರು ಜನರಿಗೆ ಗೊತ್ತಾಗುವಂತಹ ಪ್ರಜಾಪ್ರಭುತ್ವಕ್ಕೆ ಮಾರಕವಾದ ಆಟವಾಡುತ್ತಿದ್ದಾರೆ” ಎಂದು ಹೇಳಿದರು.
ಮತದಾರರ ಸೇರ್ಪಡೆಯ ಆರೋಪಕ್ಕೆ ತಿರುಗೇಟು
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 2009ರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಆಗ ಯುಪಿಎ ಸರ್ಕಾರ ಇತ್ತು. ಆಗ ಯಾರೂ ಈ ಬಗ್ಗೆ ಆರೋಪ ಮಾಡಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದರು. ಆಗ ಯಾರೂ ಅಕ್ರಮದ ಗುಮಾನಿ ಮಾಡಿರಲಿಲ್ಲ. “ಮಹದೇವಪುರದಲ್ಲಿ ಒಂದು ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಅವರೆಲ್ಲ ಯಾರಿಗೆ ಮತ ಹಾಕಿದ್ದಾರೆ ಎಂದು ಯಾರಿಗಾದರೂ ಗೊತ್ತೇ?” ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಕಾಂಗ್ರೆಸ್ ಏಜೆಂಟರ ಜವಾಬ್ದಾರಿ
ಚುನಾವಣಾ ಆಯೋಗವು ಪ್ರತಿ ಬೂತ್‌ನಲ್ಲಿ ಎಲ್ಲ ಪಕ್ಷಗಳ ಏಜೆಂಟರನ್ನು ನೇಮಿಸುತ್ತದೆ. ಮತದಾರರ ಪಟ್ಟಿ ಸೇರ್ಪಡೆಯಾಗುವಾಗ ಕಾಂಗ್ರೆಸ್ ಏಜೆಂಟರು ಇರಲಿಲ್ಲವೇ ಎಂದು ಬೊಮ್ಮಾಯಿ ಕೇಳಿದರು. “ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಗೆ ಅಫಿಡವಿಟ್ ಸಲ್ಲಿಸಲು ಕೇಳಿದೆ. ಆದರೆ, ಅವರು ಸತ್ಯವನ್ನು ಬಯಸದೇ ಹಿಟ್ ಆಂಡ್ ರನ್ ತಂತ್ರ ಅನುಸರಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ವಯನಾಡಿನ ಮತಪಟ್ಟಿ ಬಿಡುಗಡೆಗೆ ಆಗ್ರಹ
ರಾಹುಲ್ ಗಾಂಧಿಯವರು ಪ್ರತಿನಿಧಿಸಿದ್ದ ವಯನಾಡಿನ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು. “ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಆರೋಪ ಮಾಡುವ ರಾಹುಲ್ ಗಾಂಧಿಯವರು ದಾಖಲೆ ಸಮೇತ ಆರೋಪ ಸಾಬೀತುಪಡಿಸಬೇಕು. ಕಾಂಗ್ರೆಸ್‌ನವರು ಎನ್‌ಜಿಒಗಳಿಗೆ ಔಟ್‌ಸೋರ್ಸ್ ಮಾಡಿ, ಅವರಿಂದ ಬಂದ ಮಾಹಿತಿಯ ಆಧಾರದಲ್ಲಿ ಆರೋಪ ಮಾಡುತ್ತಿದ್ದಾರೆ. ಈಗ ಇವಿಎಂ ಆರೋಪದ ಸತ್ಯ ಬಯಲಾಗಿದ್ದರಿಂದ ಚುನಾವಣಾ ಆಯೋಗದ ಮೇಲೆ ಗುರಿಯಿಟ್ಟಿದ್ದಾರೆ” ಎಂದು ಆರೋಪಿಸಿದರು.
ಮೋದಿಯನ್ನು ಟೀಕಿಸುವ ನೈತಿಕತೆ ಇದೆಯೇ?
ಪ್ರಧಾನಿ ಮೋದಿಯವರು ಮತ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಮೋದಿಯವರು ಗುಜರಾತ್‌ನಲ್ಲಿ ನಾಲ್ಕು ಬಾರಿ ಸಿಎಂ, ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 32 ಸ್ಥಾನ ಕಡಿಮೆಯಾಗಿದೆ. ಕೇವಲ 30,000 ಮತಗಳ ಅಂತರದಿಂದ ಕೆಲವು ಕ್ಷೇತ್ರಗಳಲ್ಲಿ ಸೋತಿದ್ದೇವೆ. ಅಕ್ರಮವಾಗಿ ಗೆಲ್ಲಬೇಕಿದ್ದರೆ ಇಂತಹ ಫಲಿತಾಂಶ ಬರುತ್ತಿರಲಿಲ್ಲ” ಎಂದರು.
ರಾಜಕೀಯ ನಿವೃತ್ತಿಗೆ ಸವಾಲು
“ಒಂದೆಡೆ ಮಹಾರಾಷ್ಟ್ರದಲ್ಲಿ ನಕಲಿ ಮತದಾರರನ್ನು ಸೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ಪರಿಷ್ಕರಣೆಗೆ ಕ್ರಮ ಕೈಗೊಂಡರೆ ಅದನ್ನು ವಿರೋಧಿಸುತ್ತಾರೆ. ಆರೋಪ ಸಾಬೀತಾಗದಿದ್ದರೆ ರಾಹುಲ್ ಗಾಂಧಿಯವರು ರಾಜಕೀಯ ನಿವೃತ್ತಿ ಘೋಷಿಸುತ್ತಾರೆಯೇ?” ಎಂದು ಬೊಮ್ಮಾಯಿ ಸವಾಲು ಹಾಕಿದರು.
ಶಾಸಕರ ಖರೀದಿಯ ಆರೋಪಕ್ಕೆ ತಿರುಗೇಟು
ಬಿಜೆಪಿ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಶಾಸಕರ ಖರೀದಿಯನ್ನು ಆರಂಭಿಸಿದ್ದೇ ಕಾಂಗ್ರೆಸ್. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶಮುಖ್ ಅವಧಿಯಲ್ಲಿ ಡಿಕೆ ಶಿವಕುಮಾರ್ ಶಾಸಕರನ್ನು ತಮ್ಮ ಜೊತೆಗಿಟ್ಟುಕೊಂಡಿದ್ದರು. ಈ ವ್ಯವಸ್ಥೆಯನ್ನು ಆರಂಭಿಸಿದವರೇ ಕಾಂಗ್ರೆಸ್‌ನವರು” ಎಂದು ಆರೋಪಿಸಿದರು.
ಡಾ. ಸುಧಾಕರ್ ವಿರುದ್ಧ ರಾಜಕೀಯ ದುರುದ್ದೇಶ
ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್ ವಿರುದ್ಧ ಕಾರ್ ಡ್ರೈವರ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಒತ್ತಡದಿಂದ ಎ1 ಆರೋಪಿಯಾಗಿ ದಾಖಲಿಸಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು. “ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿದ್ದಾರೆ. ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನಾವು ಕಾನೂನಾತ್ಮಕವಾಗಿ ಕೋರ್ಟಿನಲ್ಲಿ ಹೋರಾಟ ಮಾಡುತ್ತೇವೆ. ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಸ್ಪಷ್ಟವಾಗಿದೆ” ಎಂದು ಹೇಳಿದರು.