ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ನಂತರ ಚುನಾವಣಾ ಆಯೋಗಕ್ಕೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿ ಹಾಗೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, “ಮತದಾರರ ಹಕ್ಕು ಮತ್ತು ಸಂವಿಧಾನದ ರಕ್ಷಣೆಗಾಗಿ ಈ ಹೋರಾಟವನ್ನು ಕರ್ನಾಟಕದ ಭೂಮಿಯಿಂದ ಆರಂಭಿಸಲಾಗುತ್ತಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಆಗಿರುವ ಲೋಪದೋಷಗಳನ್ನು ರಾಹುಲ್ ಗಾಂಧಿ ಸೇರಿದಂತೆ ನಮ್ಮ ನಾಯಕರು ಎತ್ತಿಹಿಡಿಯಲಿದ್ದಾರೆ” ಎಂದರು.
“ನಮ್ಮ ಸರ್ಕಾರದ ನಿಯಮಗಳು ಮತ್ತು ನ್ಯಾಯಾಲಯದ ನಿರ್ದೇಶನಗಳಂತೆ ಈ ಪ್ರತಿಭಟನೆ ನಡೆಯಲಿದೆ. ರಾಜ್ಯದ ಎಲ್ಲಾ ಬ್ಲಾಕ್‌ಗಳಿಂದ ಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಲಾಗಿದೆ” ಎಂದು ಶಿವಕುಮಾರ್ ಹೇಳಿದರು.
ಕರಡು ಮತದಾರರ ಪಟ್ಟಿಯ ಬಗ್ಗೆ ಕಾಂಗ್ರೆಸ್ ಈ ಹಿಂದೆ ಏಕೆ ಆಕ್ಷೇಪ ಸಲ್ಲಿಸಲಿಲ್ಲ ಎಂಬ ಪ್ರಶ್ನೆಗೆ, “ನಾವು ಆಕ್ಷೇಪಣೆ ಸಲ್ಲಿಸಿದ್ದೆವು, ಆದರೆ ಚುನಾವಣಾ ಆಯೋಗ ಅದನ್ನು ಪರಿಗಣಿಸಲಿಲ್ಲ. ಮಹದೇವರಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನಾಗೇಶ್ ಮತ್ತು ಅವರ ಮಗ ದಾಖಲೆಗಳನ್ನು ತೋರಿಸಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ ಒಂದೇ ವಾರ್ಡ್‌ನಲ್ಲಿ 7 ಸಾವಿರ ಮತದಾರರ ಸೇರ್ಪಡೆಯಾಗಿದೆ” ಎಂದು ವಿವರಿಸಿದರು.

ಪಾದಯಾತ್ರೆಯ ವಿವರ ಕೇಳಿದಾಗ, “ನಾವು ಪಾದಯಾತ್ರೆ ನಡೆಸುತ್ತಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ಜನರಿಗೆ ನಮ್ಮ ವಿಚಾರಗಳನ್ನು ತಿಳಿಸುತ್ತೇವೆ. ನಂತರ ಐದಾರು ನಾಯಕರು ಚುನಾವಣಾ ಆಯೋಗಕ್ಕೆ ತೆರಳಿ ಮನವಿ ಸಲ್ಲಿಸುತ್ತೇವೆ” ಎಂದರು. ಪೊಲೀಸರ ಸಲಹೆಯಂತೆ ನಡಿಗೆಯ ಮೂಲಕ ಅಥವಾ ವಾಹನದಲ್ಲಿ ತೆರಳಬಹುದು ಎಂದು ಸ್ಪಷ್ಟಪಡಿಸಿದರು.
ಯಾವ ಕ್ಷೇತ್ರಗಳ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂಬ ಪ್ರಶ್ನೆಗೆ, “ಈ ಬಗ್ಗೆ ರಾಹುಲ್ ಗಾಂಧಿ ಅವರೇ ತೀರ್ಮಾನಿಸಿ ಬಹಿರಂಗಪಡಿಸಿದ್ದಾರೆ. ನಾನು ಈ ವಿಷಯದಲ್ಲಿ ಏನೂ ಹೇಳುವುದಿಲ್ಲ” ಎಂದರು.
ಚುನಾವಣೆಯಾದ 45 ದಿನಗಳವರೆಗೆ ಕಾಂಗ್ರೆಸ್ ಏನು ಮಾಡಿತ್ತು ಎಂಬ ಬಿಜೆಪಿಯ ಪ್ರಶ್ನೆಗೆ, “ನಾವು ಚುನಾವಣೆ ಬಳಿಕ ಮಲಗಿರಲಿಲ್ಲ. ಅಧಿಕಾರ ಸ್ವೀಕರಿಸಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿದ್ದೇವೆ” ಎಂದು ತಿರುಗೇಟು ನೀಡಿದರು.