ಬೆಂಗಳೂರು: ರಾಹುಲ್ ಗಾಂಧಿಯವರು ಲೋಕಸಭೆಯ ವಿಪಕ್ಷ ನಾಯಕರಾಗಿರುವುದು ಭಾರತದ ದುರದೃಷ್ಟ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗೆ ರಚನಾತ್ಮಕತೆಯ ಅರಿವಿಲ್ಲ, ನಡೆ-ನುಡಿಯಲ್ಲಿ ವಿಶ್ವಾಸಾರ್ಹತೆಯಿಲ್ಲ ಎಂದು ಆರೋಪಿಸಿದರು.
“ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿ ಮುಂದುವರಿಯುವವರೆಗೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, ದೇಶಕ್ಕೂ ಹಿತವಿಲ್ಲ. ಸಿಗರೇಟ್ ಪೊಟ್ಟಣದಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುವಂತೆ, ರಾಹುಲ್ ಗಾಂಧಿಯವರನ್ನು ವಿಪಕ್ಷ ನಾಯಕರನ್ನಾಗಿ ಮುಂದುವರೆಸುವುದು ಕಾಂಗ್ರೆಸ್‌ಗೆ ಮಾತ್ರವಲ್ಲ, ದೇಶಕ್ಕೂ ಹಾನಿಕರ,” ಎಂದು ಸುರೇಶ್ ಕುಮಾರ್ ವಿಶ್ಲೇಷಿಸಿದರು.
ಹಿಂದಿನ ವಿಪಕ್ಷ ನಾಯಕರಾದ ರಾಮ್ ಸುಭಾಸ್ ಸಿಂಗ್ (1969), ವೈ. ಬಿ. ಚವ್ಹಾಣ್ (1977), ಜಗಜೀವನ್ ರಾಮ್, ರಾಜೀವ್ ಗಾಂಧಿ (1989), ಎಲ್. ಕೆ. ಆಡ್ವಾಣಿ (1991), ಅಟಲ್ ಬಿಹಾರಿ ವಾಜಪೇಯಿ (1993, 1998), ಶರದ್ ಪವಾರ್ (2004), ಸುಷ್ಮಾ ಸ್ವರಾಜ್ (2009) ಅವರ ಸಾಮರ್ಥ್ಯ, ತಿಳಿವಳಿಕೆ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿಯನ್ನು ಉಲ್ಲೇಖಿಸಿದ ಅವರು, ರಾಹುಲ್ ಗಾಂಧಿಯವರನ್ನು ಈ ಶ್ರೇಣಿಯಲ್ಲಿ ಹೋಲಿಸಲಾಗದು ಎಂದರು.
“ಹಿಟ್ ಆಂಡ್ ರನ್, ಸ್ಪಿಟ್ ಆಂಡ್ ರನ್”: ಫ್ರೀಡಂ ಪಾರ್ಕಿನಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನು ಟೀಕಿಸಿದ ಸುರೇಶ್ ಕುಮಾರ್, “ಚುನಾವಣಾ ಆಯೋಗದ ಕಚೇರಿಗೆ 500 ಮೀಟರ್ ದೂರದಲ್ಲಿದ್ದರೂ ದೂರು ಸಲ್ಲಿಸದೇ, ‘ಹಿಟ್ ಆಂಡ್ ರನ್, ಸ್ಪಿಟ್ ಆಂಡ್ ರನ್’ ತಂತ್ರ ಅನುಸರಿಸಿದ್ದಾರೆ. ದೂರು ಕೊಡಲು ಡಿ. ಕೆ. ಶಿವಕುಮಾರ್ ಅವರನ್ನು ಕಳುಹಿಸಿದ್ದಾರೆ. ಇದು ರಾಹುಲ್ ಅವರ ಠೇಂಕಾರ ಮತ್ತು ಅಹಂಕಾರದ ನಡವಳಿಕೆಯನ್ನು ತೋರಿಸುತ್ತದೆ,” ಎಂದು ಆಕ್ಷೇಪಿಸಿದರು.

“ಟುಸ್ ಪಟಾಕಿ ಭಾಷಣ”: ರಾಹುಲ್ ಗಾಂಧಿಯವರ ಭಾಷಣವನ್ನು ಶಿವಕಾಶಿಯಿಂದ ತಂದು ಮಳೆಯಲ್ಲಿ ನೆನೆದ ‘ಟುಸ್ ಪಟಾಕಿ’ಗೆ ಹೋಲಿಸಿದ ಸುರೇಶ್ ಕುಮಾರ್, “ಈ ಶ್ರೇಷ್ಠ ದೇಶದ ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಯವರನ್ನು ನೋಡಬೇಕಾಗಿರುವುದು ನಮ್ಮ ದುರದೃಷ್ಟ. ಜಾಮೀನು ಪಡೆಯಲು ಕೋರ್ಟ್ ಬೇಕಾದರೂ, ಚುನಾವಣಾ ಆಯೋಗದ ಮುಂದೆ ಪ್ರತಿಜ್ಞೆ ಮಾಡಲು ಒಪ್ಪುವುದಿಲ್ಲ,” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ “ಎಸ್‍ಒಎಂಇ” ವಿಧಾನ: ಕಾಂಗ್ರೆಸ್‌ನವರು ಸಂವಿಧಾನದ ಕವರ್ ಹಿಡಿದು ಓಡಾಡುತ್ತಾರೆ, ಆದರೆ ಒಳಗೆ ಖಾಲಿ ಹಾಳೆ ಇದೆ ಎಂದು ಟೀಕಿಸಿದ ಅವರು, “ರಾಹುಲ್ ಗಾಂಧಿಯವರು ಇಂದಿರಾ ಗಾಂಧಿಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಆದರೆ ಇಂದಿರಾ ಗಾಂಧಿಯವರ ಕಾಲದಲ್ಲಿ ಸಂವಿಧಾನಕ್ಕೆ ಅತೀ ಹೆಚ್ಚು ಅಪಚಾರವಾಯಿತು. ಕಾಂಗ್ರೆಸ್‌ಗೆ ಸಂವಿಧಾನವೆಂದರೆ ‘ಎಸ್‍ಒಎಂಇ’ (ಸಮ್) ವಿಧಾನ,” ಎಂದು ಕಿಡಿಕಾರಿದರು.
ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಅಪಚಾರ: ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದ ಸುರೇಶ್ ಕುಮಾರ್, ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಚರ್ಚೆಯ ಸಂದರ್ಭವನ್ನು ಉಲ್ಲೇಖಿಸಿದರು. “ನ್ಯಾಯಮೂರ್ತಿ ಎಚ್. ಆರ್. ಖನ್ನ ಅವರು, ಆಕಸ್ಮಿಕವಾಗಿ ಅಮಾಯಕನೊಬ್ಬನನ್ನು ಪೊಲೀಸ್ ಗುಂಡಿಟ್ಟು ಸಾಯಿಸಿದರೂ ಅದನ್ನು ಪ್ರಶ್ನಿಸಲಾಗದೆ ಎಂದು ಅಟಾರ್ನಿ ಜನರಲ್ ನಿರೇನ್ ಡೇ ಹೇಳಿದ್ದರು. ಇದು ಸಂವಿಧಾನಕ್ಕೆ ಬಗೆದ ಅಪಚಾರ,” ಎಂದು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರ ಪ್ರಕಾಶ್ ಶೇಣಿರಾಘವಾಚಾರ್, ಮಂಡಲ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.