ಭುವನೇಶ್ವರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ಉಕ್ಕು ಕ್ಷೇತ್ರ ಹೆಚ್ಚಿನ ದಕ್ಷತೆ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ತ್ವರಿತವಾಗಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಧಾನಿಗಳ ದೃಢ ಸಂಕಲ್ಪದ ಅಂಶವಾಗಿ ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರಕ್ಕೆ (Rourkela Steel Plant) ಇಂದು ಭೇಟಿ ನೀಡಿದ ಸಚಿವರು, ಸ್ಥಾವರದ ಕಾರ್ಯಾಚರಣೆ, ತಾಂತ್ರಿಕ ಸಾಮರ್ಥ್ಯ ಹಾಗೂ ನಡೆಯುತ್ತಿರುವ ಆಧುನೀಕರಣ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ರೂರ್ಕೆಲಾ ಉಕ್ಕು ಸ್ಥಾವರದ ಪ್ರಭಾರಿ ನಿರ್ದೇಶಕ ಅಲೋಕ್ ವರ್ಮ ಅವರು ಸಚಿವರಿಗೆ ಕಾರ್ಖಾನೆಯ ಕಾರ್ಯಕ್ಷಮತೆ, ತಾಂತ್ರಿಕ ಪ್ರಗತಿ, ಆಧುನೀಕರಣ ಯೋಜನೆಗಳು ಮತ್ತು ಭವಿಷ್ಯದ ಕಾರ್ಯತಂತ್ರದ ಯೋಜನೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಭೇಟಿಯ ಸಂದರ್ಭದಲ್ಲಿ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನ ಉನ್ನತ ಅಧಿಕಾರಿಗಳು ಸಚಿವರ ಜೊತೆಗಿದ್ದರು.
“ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ ಭಾರತೀಯ ಉಕ್ಕು ಕ್ಷೇತ್ರ ನೂತನ ಉನ್ನತಿಯನ್ನು ಸಾಧಿಸುತ್ತಿದೆ. ರೂರ್ಕೆಲಾ ಸ್ಥಾವರದಂತಹ ಘಟಕಗಳ ಆಧುನೀಕರಣದಿಂದ ದೇಶದ ಉಕ್ಕು ಉತ್ಪಾದನೆಯಲ್ಲಿ ಗುಣಾತ್ಮಕ ಬದಲಾವಣೆ ಉಂಟಾಗುತ್ತಿದೆ” ಎಂದು ಎಚ್.ಡಿ. ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.











