ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರು ಇಂದು ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಕೆಂಗೇರಿ-ಹೆಜ್ಜಾಲ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 15ರ (ಚಲ್ಲಘಟ್ಟ ಗೇಟ್) ಬದಲಿಗೆ ನಿರ್ಮಿಸಲಾದ ರಸ್ತೆ ಕೆಳ ಸೇತುವೆಯನ್ನು (RUB) ಉದ್ಘಾಟಿಸಿದರು. ಜೊತೆಗೆ, ಗೇಟ್ ಸಂಖ್ಯೆ 16 (ರಾಮೋಹಳ್ಳಿ ಗೇಟ್) ಬದಲಿಗೆ ರಸ್ತೆ ಕೆಳ ಸೇತುವೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಸ್ಥಳೀಯ ಸಂಚಾರ ಸುಗಮಗೊಳಿಸುವುದರ ಜೊತೆಗೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿ. ಸೋಮಣ್ಣ, ದೇಶಾದ್ಯಂತ ರಸ್ತೆ ಮೇಲ್ಸೇತುವೆಗಳು ಮತ್ತು ಕೆಳ ಸೇತುವೆಗಳ ನಿರ್ಮಾಣ ವೆಚ್ಚವನ್ನು ಭಾರತೀಯ ರೈಲ್ವೆಯೇ ಭರಿಸುತ್ತಿದೆ ಎಂದು ತಿಳಿಸಿದರು. ಕಳೆದ 10 ವರ್ಷಗಳಲ್ಲಿ 640ಕ್ಕೂ ಹೆಚ್ಚು ರಸ್ತೆ ಕೆಳಸೇತುವೆಗಳು ಮತ್ತು ಮೇಲ್ಸೇತುವೆಗಳು ಪೂರ್ಣಗೊಂಡಿವೆ. ಚಲ್ಲಘಟ್ಟ ರಸ್ತೆ ಕೆಳ ಸೇತುವೆಯ ಉದ್ಘಾಟನೆ ಮತ್ತು ರಾಮೋಹಳ್ಳಿಯಲ್ಲಿ ಆರಂಭವಾಗಿರುವ ಕಾಮಗಾರಿಯಿಂದ ಲೆವೆಲ್ ಕ್ರಾಸಿಂಗ್‌ಗಳಲ್ಲಿ ವಾಹನ ಸಂಚಾರಕ್ಕೆ ಉಂಟಾಗುವ ವಿಳಂಬ ಕಡಿಮೆಯಾಗಲಿದೆ. ಇದು ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ದಟ್ಟಣೆಯನ್ನು ಕಡಿಮೆಗೊಳಿಸಿ, ಸ್ಥಳೀಯರಿಗೆ ಉಪಯುಕ್ತವಾಗಲಿದೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ಸುತ್ತಲಿನ 100 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ಪುನರಾಭಿವೃದ್ಧಿ, ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ವಿಶ್ವ ದರ್ಜೆಗೆ ಉನ್ನತೀಕರಣ, ಎರಡು ಹೊಸ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ, ಬೆಂಗಳೂರು ಉಪನಗರ ರೈಲು ಯೋಜನೆ, ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ಡಬ್ಲಿಂಗ್ ಮತ್ತು ಮೆಗಾ ಕೋಚಿಂಗ್ ಟರ್ಮಿನಲ್ ಅಭಿವೃದ್ಧಿಯಂತಹ ಮೂಲಸೌಕರ್ಯ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು, ಈ ರಸ್ತೆ ಕೆಳ ಸೇತುವೆಯಿಂದ ಸ್ಥಳೀಯರ ದೀರ್ಘಕಾಲದ ಬೇಡಿಕೆ ಈಡೇರಿದೆ ಎಂದರು. ಲೆವೆಲ್ ಕ್ರಾಸಿಂಗ್‌ಗಳ ಬಳಿಯ ವಾಹನಗಳ ಕಾಯುವ ಸಮಯ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಇಂತಹ ಯೋಜನೆಗಳು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಇಂತಹ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಚಲ್ಲಘಟ್ಟದ ರಸ್ತೆ ಕೆಳ ಸೇತುವೆಯನ್ನು ₹5.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಚಲ್ಲಘಟ್ಟವನ್ನು ಮೈಸೂರು ರಸ್ತೆಗೆ ಸಂಪರ್ಕಿಸುತ್ತದೆ. ರಾಮೋಹಳ್ಳಿ ಗೇಟ್‌ನ ರಸ್ತೆ ಕೆಳ ಸೇತುವೆ ಕಾಮಗಾರಿಯನ್ನು ₹7.74 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ಶ್ರೀ ಟಿ.ಎನ್. ಜವರಾಯಿ ಗೌಡ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಆಶುತೋಷ್ ಮಾಥುರ್, ಹಿರಿಯ ವಿಭಾಗೀಯ ಎಂಜಿನಿಯರ್ ಶ್ರೀ ರಾಜೀವ್ ಶರ್ಮಾ ಸೇರಿದಂತೆ ಇತರ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.