ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನ ಥೇಮ್ಸ್ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಸಾಮಾಜಿಕ ಕ್ರಾಂತಿಕಾರ ಬಸವೇಶ್ವರರ ಪುತ್ಥಳಿಗೆ ಕರ್ನಾಟಕದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ಪುಷ್ಪನಮನ ಸಲ್ಲಿಸಿದರು.
2026ರ ಏಪ್ರಿಲ್ 18ರಂದು ಲಂಡನ್‌ನ ಬಸವೇಶ್ವರ ಪ್ರತಿಮೆಯ 10ನೇ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸುವಂತೆ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪರವಾಗಿ ಡಾ. ನೀರಜ್ ಪಾಟೀಲ್ ಅವರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ಪತ್ರವನ್ನು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, “ಬಸವ ತತ್ವಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವೇಶ್ವರರ ಪ್ರತಿಮೆಯ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವಂತೆ ಈ ಮನವಿಯನ್ನು ಮಾಡಿದ್ದೇನೆ. ಉಭಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ,” ಎಂದು ತಿಳಿಸಿದರು.
ಬಸವೇಶ್ವರರ ವಚನಗಳು ಇಂದಿನ ಕಾಲಘಟ್ಟದಲ್ಲಿಯೂ ಅತ್ಯಂತ ಪ್ರಸ್ತುತವಾಗಿದ್ದು, ನ್ಯಾಯಸಮ್ಮತ ಮತ್ತು ಸಮಾನತೆಯಿರುವ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ಸಚಿವರು ಹೇಳಿದರು.
ಬಸವೇಶ್ವರರ ಪ್ರತಿಮೆಯನ್ನು 2015ರ ನವೆಂಬರ್ 14ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ಸ್ಥಳೀಯ ಕನ್ನಡಿಗರು ಉಪಸ್ಥಿತರಿದ್ದರು.