ರಕ್ಷಣಾ ರಾಜ್ಯ ಸಚಿವ ಶ್ರೀ ಸಂಜಯ್ ಸೇಠ್ ಅವರ ನೇತೃತ್ವದ ಭಾರತೀಯ ತಂಡವು ಮಲೇಷಿಯಾದ ಲಾಂಗ್ಕಾವಿಯಲ್ಲಿ ನಡೆಯುತ್ತಿರುವ 17ನೇ ಲಾಂಗ್ಕಾವಿ ಅಂತಾರಾಷ್ಟ್ರೀಯ ಸಮುದ್ರ ಮತ್ತು ಏರೋಸ್ಪೇಸ್ ಪ್ರದರ್ಶನ (LIMA 2025) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿತು. ಐದು ದಿನಗಳ ಈ ಕಾರ್ಯಕ್ರಮವನ್ನು ಮಲೇಷಿಯಾದ ಪ್ರಧಾನಮಂತ್ರಿ ದಾಟೋ ಸೆರಿ ಅನ್ವರ್ ಬಿನ್ ಇಬ್ರಾಹಿಂ ಅವರು ಉದ್ಘಾಟಿಸಿದರು.
ಶ್ರೀ ಸಂಜಯ್ ಸೇಠ್ ಅವರು LIMA 2025 ರಲ್ಲಿ ಭಾರತದ ಪೆವಿಲಿಯನ್‌ನ್ನು ಉದ್ಘಾಟಿಸಿದರು, ಇದು ಭಾರತದ ಸ್ವದೇಶಿ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಈ ಪೆವಿಲಿಯನ್‌ನಲ್ಲಿ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಖಾಸಗಿ ಕಂಪನಿಗಳು ಭಾಗವಹಿಸಿವೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯನ್ನು ಒತ್ತಿಹೇಳುವ ಈ ಕಾರ್ಯಕ್ರಮವು ಬ್ರಹ್ಮೋಸ್ ಮತ್ತು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದ ಡಾರ್ನಿಯರ್ ವಿಮಾನ ಸೇರಿದಂತೆ ಸ್ವದೇಶಿ ತಂತ್ರಜ್ಞಾನಗಳನ್ನು ಪ್ರದರ್ಶಿಸಿತು. ಪ್ರಮುಖ ರಾಷ್ಟ್ರಗಳ ಮಧ್ಯೆ ಭಾರತದ ಈ ಪ್ರಭಾವಶಾಲಿ ಪೆವಿಲಿಯನ್, ರಕ್ಷಣಾ ಉತ್ಪಾದನೆಯ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಪ್ರತಿಷ್ಠೆಯನ್ನು ಎತ್ತಿ ತೋರಿಸುತ್ತದೆ.
ರಕ್ಷಣಾ ರಾಜ್ಯ ಸಚಿವರು ಪ್ರದರ್ಶನ ಸ್ಥಳದಲ್ಲಿನ ಸ್ಟಾಲ್‌ಗಳಿಗೆ ಭೇಟಿ ನೀಡಿದರು ಮತ್ತು ವಿವಿಧ ದೇಶಗಳಿಂದ ಬಂದ ಗಣ್ಯರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾದರು.
ಭಾರತ ಮತ್ತು ಮಲೇಷಿಯಾ ನಡುವೆ ದೃಢವಾದ ಮತ್ತು ಬಹುಮುಖ ಸಂಬಂಧವಿದೆ, ಇದು 2024 ರಲ್ಲಿ ಮಲೇಷಿಯಾದ ಪ್ರಧಾನಮಂತ್ರಿಯ ಭಾರತ ಭೇಟಿಯ ಸಂದರ್ಭದಲ್ಲಿ ಸ್ಥಾಪಿತವಾದ ಸಮಗ್ರ ಕಾರ್ಯತಂತ್ರದ ಒಡಂಬಡಿಕೆಯ ದೃಷ್ಟಿಯಡಿಯಲ್ಲಿ ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಹಲವಾರು ಕಾರ್ಯತಂತ್ರದ ಕ್ಷೇತ್ರಗಳಿಗೆ ವಿಸ್ತರಿಸಿದೆ.
ಭಾರತೀಯ ನೌಕಾಪಡೆಯ ಒಂದು ಯುದ್ಧನೌಕೆಯು ಸಹ LIMA 2025 ರಲ್ಲಿ ಭಾಗವಹಿಸಲಿದೆ. 1991 ರಲ್ಲಿ ಸ್ಥಾಪನೆಯಾದ LIMA, ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮವು ಏಷಿಯಾ-ಪೆಸಿಫಿಕ್ ಪ್ರದೇಶದಲ್ಲಿ ಅತಿದೊಡ್ಡ ಮತ್ತು ಪ್ರಮುಖ ಸಮುದ್ರ ಮತ್ತು ಏರೋಸ್ಪೇಸ್ ಪ್ರದರ್ಶನಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ.