ಬೆಂಗಳೂರು: ಜ. 26:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಪ್ರಾಣಿಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲು ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದ್ದು, ಇಂದು ಲಾಲ್‌ಬಾಗ್ ನಲ್ಲಿ ಅಭಿಯಾನ ನಡೆಸಲಾಯಿತು.
ಬಿಬಿಎಂಪಿ ಪಶುಪಾಲನೆ ವಿಭಾಗದಿಂದ “ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯ”ದ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲೂ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ದಕ್ಷಿಣ ವಲಯದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಅದಕ್ಕಾಗಿ ಸಹಸ್ರಾರು ಮಂದಿ ಸೇರುವ ಹಿನ್ನೆಲೆಯಲ್ಲಿ ಇಂದು ಲಾಲ್ ಬಾಗ್ ನಲ್ಲಿ ಸಮುದಾಯ ಪ್ರಾಣಿಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಬೀದಿ ನಾಟಕ/ನೃತ್ಯದ ಮೂಲಕ ಜಾಗೃತಿ:
ಲಾಲ್ ಬಾಗ್ ನಲ್ಲಿಂದು ಬೆಳಗ್ಗೆ 11.00 ಗಂಟೆಗೆ, ಮಧ್ಯಾಹ್ನ 02.00 ಹಾಗೂ ಸಂಜೆ 5.00 ಗಂಟೆಗೆ ಸಮುದಾಯದ ಪ್ರಾಣಿಗಳ ಕುರಿತು ಬೀದಿ ನಾಟಕ, ನೃತ್ಯದ ಮೂಲಕ 1500ಕ್ಕೂ ಹೆಚ್ಚು ನಾಗರೀಕರಲ್ಲಿ ಮಾನವ ಪ್ರಾಣಿಗಳ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.