ಬೆಂಗಳೂರು: ನಗರದಲ್ಲಿರುವ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಬಿಜೆಪಿ ವಿರೋಧಿ ಗುಂಪಿನ ಸಭೆ ನಡೆಯಿತು. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಈ ಸಭೆಯ ಬಳಿಕ ಮಾಜಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರತಾಪ್ ಸಿಂಹ ಅವರು, “ಕಳೆದ ಆರು ತಿಂಗಳಿಂದ ಯತ್ನಾಳ್ ಅವರ ನಾಯಕತ್ವದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಮತ್ತು ಈ ಹೋರಾಟದಲ್ಲಿ ಸಾಕಷ್ಟು ಯಶಸ್ಸು ಕೂಡಾ ಸಿಕ್ಕಿದೆ. ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶ್ರೀರಕ್ಷೆಯೊಂದಿಗೆ ಬಡ ರೈತರ ಭೂಮಿ ಮತ್ತು ಮಠಮಾನ್ಯಗಳ ಆಸ್ತಿಗಳನ್ನು ಕಬಳಿಸುವ ಕೆಲಸ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.
ಅವರು ಮುಂದುವರಿದು, “ವಕ್ಫ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಯತ್ನಾಳ್ ಕಿಚ್ಚು ಹಚ್ಚಿದವರಾಗಿದ್ದಾರೆ. ಹಿಂದೆ ಅವರು ಸಚಿವರಾಗಿದ್ದಾಗ, ಕುಮಾರ್ ಬಂಗಾರಪ್ಪನವರ ಕಮಿಟಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಈ ಹೋರಾಟವನ್ನು ಮುಂದುವರಿಸುತ್ತಿದ್ದೇವೆ. ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಹೋರಾಟದ ವರದಿಯನ್ನು ಸಲ್ಲಿಸಿದ್ದೇವೆ. ನಮ್ಮ ತಂಡ ಮಾಡಿದ ಕಾರ್ಯಕ್ಕೆ ಜೆಪಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ,” ಎಂದು ಹೇಳಿದರು.
ಈ ಸಭೆಯಲ್ಲಿ ಬಿಜೆಪಿಯ ಕೆಲ ಅಸಂತೃಪ್ತ ನಾಯಕರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.