ಬೆಂಗಳೂರು: ಏರ್ ಮಾರ್ಷಲ್ ತೇಜೀಂದರ್ ಸಿಂಗ್ ಅವರು ಮೇ 1ರಂದು ಭಾರತೀಯ ವಾಯು ಸೇನೆಯ ತರಬೇತಿ ಆಜ್ಞಾಪಕರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಅವರು ತರಬೇತಿ ಆಜ್ಞಾಪಕರ ಮುಖ್ಯ ಕಛೇರಿಯಲ್ಲಿ ಗೌರವ ವಂದನೆ ಸ್ವೀಕರಿಸಿ, ವಾರ್ ಮೆಮೋರಿಯಲ್‌ನಲ್ಲಿ ಪುಷ್ಪಾಂಜಲಿ ಸಲ್ಲಿಸಿದರು.
ಜೂನ್ 1987ರಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡಿರುವ ತೇಜೀಂದರ್ ಸಿಂಗ್ ಅವರಿಗೆ 4500ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವವಿದೆ. ಅವರು ಫೈಟರ್ ಸ್ಕ್ವಾಡ್ರನ್, ರಡಾರ್ ಸ್ಟೇಷನ್ ಹಾಗೂ ಪ್ರಮುಖ ಯುದ್ಧ ವಿಮಾನ ನೆಲೆಗಳನ್ನು ನಡಿಸಿದ ಅನುಭವವಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ವಾಯುಸೇನೆ ಆಜ್ಞಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಹೆಚ್ಚುವರಿ ಉಪವಾಯುಪಡೆ ಅಧಿಕಾರಿ (ಆಪರೆಷನ್ಸ್ – ಆಕ್ರಮಣ), ಹೆಚ್ಚುವರಿ ಉಪವಾಯುಪಡೆ ಅಧಿಕಾರಿ (ಯುಕ್ತಿ) ಮತ್ತು ಪೂರ್ವ ವಾಯುಪಡೆಯ ಮುಖ್ಯ ಸಿಬ್ಬಂದಿ ಅಧಿಕಾರಿ (SASO) ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಧಿಕಾರ ಸ್ವೀಕರಿಸುವ ಮೊದಲು ಅವರು ವಾಯು ಸೇನೆ ಮಹಾನಿರ್ದೇಶನದಲ್ಲಿ ಉಪವಾಯುಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.