ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳ ಹಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡವರಿಗೆ ರಾಜ್ಯದ ಜನತೆಯೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, “ಈ ಹಗರಣದ ಹಣದಿಂದ ಕೆಲವರು ಸಂಸದರಾಗಿರಬಹುದು, ಶಾಸಕರಾಗಿರಬಹುದು. ಆದರೆ ಈ ನಾಡಿನ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ,” ಎಂದರು.
ಬಳ್ಳಾರಿ ಜಿಲ್ಲೆಯ ಸಂಸದ ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್, ಮತ್ತು ಕಂಪ್ಲಿ ಶಾಸಕ ಗಣೇಶ್ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ. “ಈ ನಾಯಕರು ತಾವು ಸಾಚಾವೆಂದು ಮಾತನಾಡುತ್ತಿದ್ದರು. ಆದರೆ ಇವರೆಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರು ಇವರನ್ನು ಸಾಚಾವೆಂದು ಭಾವಿಸಿದ್ದರು, ಆದರೆ ಇವರ ಮುಖವಾಡ ಈಗ ಕಳಚಿ ಬೀಳುತ್ತಿದೆ,” ಎಂದು ಶ್ರೀರಾಮುಲು ಆರೋಪಿಸಿದರು.
ಪಾದಯಾತ್ರೆಯಿಂದ ಸಚಿವರ ರಾಜೀನಾಮೆ: ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿತ್ತು. “ನಾವು ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ್ದೆವು. ನಮ್ಮ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಿ ಜೈಲು ಸೇರಿದ್ದಾರೆ,” ಎಂದು ಶ್ರೀರಾಮುಲು ತಿಳಿಸಿದರು.
ತನಿಖೆಯ ಸಂದರ್ಭದಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರ್ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. “ಆ ಡೆತ್‌ನೋಟ್‌ನಲ್ಲಿ ಸಚಿವರ ಕೈವಾಡ ಮತ್ತು ಇತರ ಅಧಿಕಾರಿಗಳ ಭಾಗಿತ್ವದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಬಿಜೆಪಿ ಈ ಹಗರಣದ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿದೆ,” ಎಂದು ಅವರು ಹೇಳಿದರು.
187 ಕೋಟಿ ಹಣದ ದುರುಪಯೋಗ: “ನಿಗಮದ 187 ಕೋಟಿ ರೂ. ಹಣವನ್ನು ಬಾರ್ ಶಾಪ್‌ಗಳಿಗೆ, ಸೆಕ್ಯುರಿಟಿ ಏಜೆನ್ಸಿಗಳಿಗೆ, ಮತ್ತು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಹಣ ಎಲ್ಲಿಗೆ ಹೋಗಿದೆ ಎಂದು ಸರ್ಕಾರಕ್ಕೂ ಉತ್ತರವಿಲ್ಲ. ಪರಿಶಿಷ್ಟ ಜಾತಿ-ಪಂಗಡಗಳ ಜನರಿಗೆ ನೀಡಬೇಕಾದ ವಿದ್ಯಾರ್ಥಿವೇತನ, ಗಂಗಾ ಕಲ್ಯಾಣ ಯೋಜನೆಯ ಹಣವನ್ನು ಈ ಭ್ರಷ್ಟರು ದುರುಪಯೋಗ ಮಾಡಿದ್ದಾರೆ,” ಎಂದು ಶ್ರೀರಾಮುಲು ಆಕ್ಷೇಪಿಸಿದರು.
ಸರ್ಕಾರದ ವೈಫಲ್ಯ: ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ-ಪಂಗಡಗಳ ಜನರ ಪರವಾಗಿ ಇದ್ದೇವೆ ಎಂದು ಹೇಳಿಕೊಳ್ಳುತ್ತದೆ ಆದರೆ, ಆ ಮಕ್ಕಳ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಶ್ರೀರಾಮುಲು ಟೀಕಿಸಿದರು. “ಸರ್ಕಾರಗಳು ಬಂದು ಹೋಗಬಹುದು, ಆದರೆ ಮಂತ್ರಿಗಳು ಮತ್ತು ಜನಪ್ರತಿನಿಧಿಗಳು ಜನರ ಹಣವನ್ನು ದುರುಪಯೋಗ ಮಾಡಿದರೆ, ಅವರನ್ನು ರಾಜಕಾರಣಿಗಳೆಂದು ಕರೆಯಲು ಯೋಗ್ಯರೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳಿಗೆ ಆಗ್ರಹ: “ಮುಖ್ಯಮಂತ್ರಿಗಳು ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, 187 ಕೋಟಿ ರೂ. ಭ್ರಷ್ಟಾಚಾರದ ಹಣವನ್ನು ವಸೂಲಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದು ಶ್ರೀರಾಮುಲು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಬಿಜೆಪಿ ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ್, ವೆಂಕಟೇಶ್ ಉಪಸ್ಥಿತರಿದ್ದರು.