ವಿವಿಧ ಇಲಾಖೆಗಳ ₹4,555 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ವಿಜಯಪುರ: ವಿಜಯಪುರ ಮತ್ತು ಸುತ್ತಮುತ್ತಲಿನ 93,000 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ₹3,200 ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇಂಡಿ ತಾಲೂಕಿನಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸ್ಥಳೀಯ ಶಾಸಕರು ರೈತರಿಗೆ ನೆರವಾಗುವ ಯೋಜನೆಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರ್ತಿ-ರೇವಣ್ಣ ಸಿದ್ದೇಶ್ವರ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ, ಮತ್ತು ಇಂಡಿ ತಾಲೂಕಿನ 90 ಕೆರೆಗಳನ್ನು ಭರ್ತಿಗೊಳಿಸುವ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಂದ ಒಟ್ಟು ₹4,555 ಕೋಟಿ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ” ಎಂದು ಶಿವಕುಮಾರ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳು
ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಸರ್ಕಾರದ ಹಣ ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗಿದೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಆದರೆ, ಶಕ್ತಿ ಯೋಜನೆಯಡಿ ಸಾರಿಗೆ ಇಲಾಖೆಯು ಇದುವರೆಗೆ 500 ಕೋಟಿ ಟ್ರಿಪ್‌ಗಳನ್ನು ಪೂರೈಸಿದೆ, ಇದಕ್ಕಾಗಿ ₹12,669 ಕೋಟಿ ವೆಚ್ಚವಾಗಿದೆ. ಇದು ಗ್ಯಾರಂಟಿ ಯೋಜನೆಯಾದರೆ, ಇಂದು ₹4,555 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿರುವುದು ಅಭಿವೃದ್ಧಿಯ ಕೊಡುಗೆ” ಎಂದರು.
“ಬಿಜೆಪಿ ಟೀಕೆಗಳು ಕ್ಷಣಿಕವಾದರೆ, ನಮ್ಮ ಯೋಜನೆಗಳು ಶಾಶ್ವತವಾಗಿ ಉಳಿಯುತ್ತವೆ. ಸಾರಿಗೆ ಇಲಾಖೆಯಲ್ಲಿ 5,700 ಹುದ್ದೆಗಳ ಭರ್ತಿ, ಪರಿಶಿಷ್ಟರಿಗೆ ₹2 ಕೋಟಿಯವರೆಗೆ ಗುತ್ತಿಗೆ ಮೀಸಲಾತಿ, ಮತ್ತು ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕ ₹5,000 ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಈ ಭಾಗದ 42 ಕ್ಷೇತ್ರಗಳಿಗೆ ಸರಾಸರಿ ₹100 ಕೋಟಿ ಸಿಗಲಿದೆ” ಎಂದು ವಿವರಿಸಿದರು.
ವಿರೋಧಿಗಳಿಗೆ ಡಿಸಿಎಂ ಪ್ರಶ್ನೆ
“ಬೀದರ್‌ನಲ್ಲಿ ₹2,025 ಕೋಟಿ, ಪಿರಿಯಾಪಟ್ಟಣದಲ್ಲಿ ₹500 ಕೋಟಿ, ಮೈಸೂರಿನಲ್ಲಿ ₹3,647 ಕೋಟಿ ಮೊತ್ತದ ಕಾಮಗಾರಿಗಳು ಆರಂಭವಾಗಿವೆ. ಆರೋಗ್ಯ, ಪ್ರವಾಸೋದ್ಯಮ, ಮತ್ತು ಬೆಂಗಳೂರಿನ ₹1 ಲಕ್ಷ ಕೋಟಿ ಯೋಜನೆಗಳು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತೋರಿಸುತ್ತವೆ. ಇದು ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಣಿಸುತ್ತಿಲ್ಲವೇ?” ಎಂದು ಶಿವಕುಮಾರ್ ಪ್ರಶ್ನಿಸಿದರು.
“ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬೆಲೆ ಏರಿಕೆ ಮತ್ತು ಆದಾಯ ಕುಸಿತದ ಸಂದರ್ಭದಲ್ಲಿ ಬಡವರಿಗೆ ನೆರವಾಗಲು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ₹5,000 ಉಳಿತಾಯವಾಗುತ್ತಿದೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಯೋಜನೆಗಳ ಶಾಶ್ವತತೆ
“ಕಾಂಗ್ರೆಸ್ 70 ವರ್ಷ ದೇಶವನ್ನು ಆಳಿದೆ. ಭೂ ಸುಧಾರಣೆ, ಪಂಚವಾರ್ಷಿಕ ಯೋಜನೆ, ಬಡವರಿಗೆ ನಿವೇಶನ, ಮನೆ, ಪಿಂಚಣಿ, ಉದ್ಯೋಗ ಖಾತರಿಯಂತಹ ಯೋಜನೆಗಳನ್ನು ಯಾರೂ ಬದಲಿಸಲಾಗಿಲ್ಲ. ಅದೇ ರೀತಿ, ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನೂ ಯಾರೂ ನಿಲ್ಲಿಸಲಾರರು” ಎಂದು ಶಿವಕುಮಾರ್ ಒತ್ತಿ ಹೇಳಿದರು.
“ಬಳ್ಳಾರಿ ಮತ್ತು ವಿಜಯನಗರದಲ್ಲಿ 1,11,111 ಜನರಿಗೆ ಭೂ ಗ್ಯಾರಂಟಿ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಿ, ಸ್ಥಳೀಯ ಅಭಿವೃದ್ಧಿಗೆ ಅನುಮೋದನೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಜನರ ನಂಬಿಕೆಗೆ ಗೌರವ
“ಸರ್ವಜ್ಞನ ವಚನದಂತೆ, ನಂಬಿಕೆಗಿಂತ ದೊಡ್ಡ ಗುಣವಿಲ್ಲ. ಇಂಡಿ ತಾಲೂಕಿನ ಜನರು ಮೂರು ಬಾರಿ ಯಶವಂತ ಪಾಟೀಲ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ, ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಗೆ ಗೌರವವಾಗಿ ₹4,555 ಕೋಟಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
“ಈ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿರುವಿರಿ. ಇಂಡಿಯನ್ನು ನಿಂಬೆಹಣ್ಣಿನ ನಾಡು ಎಂದೇ ಕರೆಯುತ್ತೇವೆ. ಈ ತಾಲೂಕಿಗೆ ಎರಡನೇ ಬಾರಿಗೆ ಇಷ್ಟು ದೊಡ್ಡ ಮಟ್ಟದ ನೀರಾವರಿ ಯೋಜನೆಗೆ ಅನುದಾನ ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಕೈಗಾರಿಕೆ ಆಕರ್ಷಣೆಗೆ ಶ್ರಮಿಸುತ್ತಿದ್ದಾರೆ. 2028ರಲ್ಲಿ ಈ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ, ಈ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತನ್ನಿ” ಎಂದು ಅವರು ಕರೆ ನೀಡಿದರು.