ಬೆಂಗಳೂರು, ಮಾರ್ಚ್ 10: ಕರ್ನಾಟಕ ವಿಧಾನಸಭೆಯಲ್ಲಿ ಇಂದು “ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025” ವಿಧೇಯಕವನ್ನು ಅಂಗೀಕರಿಸಲಾಯಿತು. ಈ ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಮಂಡಿಸಿದರು.
ಸಾಲಗಾರರ ರಕ್ಷಣೆಗೆ ಹೊಸ ಕಾಯಿದೆ: ಸಚಿವರು ತಮ್ಮ ಭಾಷಣದಲ್ಲಿ, ಕಿರುಸಾಲ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳ ಅನಿಯಂತ್ರಿತ ಚಟುವಟಿಕೆಗಳು ಬಡ ಮತ್ತು ದುರ್ಬಲ ವರ್ಗದ ಜನರನ್ನು ಆರ್ಥಿಕವಾಗಿ ಶೋಷಿಸುತ್ತಿವೆ ಎಂದು ತೀವ್ರವಾಗಿ ಚರ್ಚಿಸಿದರು. ಈ ವಿಧೇಯಕವು ಸಾಲಗಾರರನ್ನು ಬಲವಂತದ ವಸೂಲಾತಿಯಿಂದ ರಕ್ಷಿಸುವ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ.
ಅನಿಯಂತ್ರಿತ ಲೇವಾದೇವಿ ವಿರುದ್ಧ ಕ್ರಮ: ಸಾಲಗಾರರಿಗೆ ಅನಾವಶ್ಯಕ ಬಡ್ಡಿ ಪಾವತಿಸಲು ಒತ್ತಾಯಿಸುವ, ಬಡವರ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಲೇವಾದೇವಿ ಮಾಫಿಯಾಗಳ ವಿರುದ್ಧ ಈ ಕಾಯಿದೆ ಕಠಿಣ ಕ್ರಮ ಕೈಗೊಳ್ಳಲಿದೆ. ಇದರಿಂದ ಬಡ ಗ್ರಾಮೀಣ ಜನರು, ನಗರ ಕಾರ್ಮಿಕರು, ಮಹಿಳೆಯರು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳು ಆರ್ಥಿಕ ಶೋಷಣೆಯಿಂದ ಮುಕ್ತರಾಗಲಿದ್ದಾರೆ.
ವಿಧಾನಸಭೆಯ ಒಮ್ಮತ: ವಿಧಾನಸಭೆಯ ಎಲ್ಲಾ ಸದಸ್ಯರು ಈ ವಿಧೇಯಕವನ್ನು ಪರಾಮರ್ಶಿಸಿ, ಒಮ್ಮತದ ಬೆಂಬಲವನ್ನು ನೀಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಉಪನಾಯಕರು ಬೆಲ್ಲದ್, ಲಕ್ಷ್ಮಣ್ ಸವದಿ, ರಂಗನಾಥ್ ಮತ್ತು ಇತರ ಸದಸ್ಯರು ಕೂಡ ಈ ವಿಧೇಯಕದ ಅಗತ್ಯತೆಯನ್ನು ಒತ್ತಿಹೇಳಿದರು.
ಅಂತಿಮ ಅಂಗೀಕಾರ: ಸಚಿವಸಂಪುಟದಲ್ಲಿ ಸುದೀರ್ಘ ಚರ್ಚೆಯ ನಂತರ, ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಸದನದ ಎಲ್ಲಾ ಸದಸ್ಯರು ಒಮ್ಮತದ ಬೆಂಬಲ ಸೂಚಿಸಿದ ನಂತರ, “ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025” ವಿಧೇಯಕವು ಅಂಗೀಕರಿಸಲ್ಪಟ್ಟಿತು.