ಸಾಲಗಾರರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಮತ್ತು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ರಕ್ಷಿಸಲು, ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ‘ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025’ನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ.ಈ ವಿಧೇಯಕವನ್ನು ವಿಧಾನಸಭೆ ತಿದ್ದುಪಡಿಯೊಂದಿಗೆ ಅನುಮೋದಿಸಿದ ಬಳಿಕ, ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಅವರ ಪರವಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಮಂಡಿಸಿದರು. ಈ ಪ್ರಸ್ತಾವಿತ ಕಾನೂನಿನ ಪ್ರಮುಖ ಉದ್ದೇಶ ಸಾಲಗಾರರ ಹಕ್ಕುಗಳನ್ನು ರಕ್ಷಿಸುವುದು, ಅವಸರದ ಸಾಲದ (ಕಿರು ಸಾಲ) ಹೆಜ್ಜೆ ತಪ್ಪಿಸಿ, ಸಾಲದ ಏಟಿಗೆ ಜನರು ಗ್ರಾಮ ತೊರೆದು ಹೋಗುವಂತಹ ಪರಿಸ್ಥಿತಿಗಳನ್ನು ತಪ್ಪಿಸುವುದು ಮತ್ತು ದಬ್ಬಾಳಿಕೆಯನ್ನು ನಿಯಂತ್ರಿಸುವುದು.ಕಠಿಣ ಶಿಕ್ಷೆಗಳು, ಹೆಚ್ಚು ಸುರಕ್ಷತೆಈ ಹೊಸ ಕಾನೂನಿನಡಿ ದೌರ್ಜನ್ಯ ಮತ್ತು ಬಲವಂತದ ಕ್ರಮಗಳ ವಿರುದ್ಧ ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ಸಿಗಲಿದೆ. ಇದರಲ್ಲಿ ಶಿಕ್ಷೆಯ ಅವಧಿಯನ್ನು 3 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದ್ದು, ದಂಡವನ್ನು 5 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಏರಿಸಲಾಗಿದೆ. ಇದರಿಂದಾಗಿ ಸಾಲಗಾರರ ಮೇಲೆ ನಡೆಯುವ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.ಬ್ಯಾಂಕುಗಳಿಗೆ, ಸಹಕಾರಿ ಸಂಘಗಳಿಗೆ ನಿಯಂತ್ರಣಈ ಕಾನೂನಿನಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಂತ್ರಿತ ಮತ್ತು ನೋಂದಾಯಿತ ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ವ್ಯವಹಾರ ಸಂಬಂಧಿತ ಬ್ಯಾಂಕುಗಳ ಮೇಲೆ ನಿಯಂತ್ರಣ ಹೇರಲಾಗುತ್ತದೆ. ಜೊತೆಗೆ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ 11)ನಡಿ ನೋಂದಾಯಿತ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಗೂ ಈ ನಿಯಮ ಅನ್ವಯವಾಗಲಿದೆ.ಸಮಾಜದಲ್ಲಿ ಸಾಲದ ದುರುಪಯೋಗ ತಡೆಗಟ್ಟಲು, ಜನರ ಹಿತ ಕಾಪಾಡಲು ಈ ವಿಧೇಯಕ ಬಹಳ ಅಗತ್ಯವಾದ ಹೆಜ್ಜೆಯಾಗಿದ್ದು, ರಾಜ್ಯ ಸರ್ಕಾರ ಈ ಮೂಲಕ ಸಾಲಗಾರರ ಮೇಲೆ ನಡೆಯುವ ಜುಲಂ, ಬಲವಂತದ ವಸೂಲಿ ತಡೆಗಟ್ಟಲು ಸನ್ನದ್ದವಾಗಿದೆ.