ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಾರ್ಚ್ 21ರಂದು ‘ವಿಶ್ವ ಜಲ ದಿನ’ದ ಅಂಗವಾಗಿ ರಾಜ್ಯದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ನೀರಿನ ಮಹತ್ವ, ಮಿತ ಬಳಕೆ ಮತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನೀರಿನ ಸಂರಕ್ಷಣೆ ಕುರಿತ ಜಾಗೃತಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ಓದುವ ಬೆಳಕು’ ಕಾರ್ಯಕ್ರಮದಡಿ ಈ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತಯಾರಿ ನಡೆಸಿದೆ. ಮಕ್ಕಳಲ್ಲಿ ನೀರಿನ ಮೂಲಗಳು, ಮಳೆ ನೀರು ಕೊಯ್ದು ಸಂಗ್ರಹಿಸುವ ಅಗತ್ಯ, ಕುಡಿಯುವ ನೀರಿನ ಪೂರೈಕೆಯ ವಿಧಾನ, ನೀರಿನ ಕೊಳವೆ ಮಾರ್ಗಗಳ ಸುರಕ್ಷತೆ ಮತ್ತು ಕೈಪಂಪ್‌ಗಳು ಹಾಗೂ ಕಿರುನೀರು ಸರಬರಾಜು ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಸಚಿವರು, ಮಕ್ಕಳಿಗೆ ನೀರಿನ ಸಂರಕ್ಷಣೆ ಕುರಿತ ಕ್ಷೇತ್ರ ಭೇಟಿ (field visit) ಆಯೋಜಿಸಿ, ಕುಡಿಯುವ ನೀರಿನ ಮೂಲಗಳನ್ನು ನೇರವಾಗಿ ಅವಲೋಕಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಶ್ವ ಅರಣ್ಯ ದಿನದ ಅಂಗವಾಗಿ ಸಸಿ ನೆಡುವ ಅಭಿಯಾನ
ಇದೇ ಮಾರ್ಚ್ 21ರಂದು ‘ವಿಶ್ವ ಅರಣ್ಯ ದಿನ’ವನ್ನೂ ಹಬ್ಬದಂತೆ ಆಚರಿಸಲು ಸರ್ಕಾರ ಯೋಜಿಸಿದೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ರತಿ ವಿದ್ಯಾರ್ಥಿ ಒಬ್ಬೊಬ್ಬರು ಸಸಿ ನೆಟ್ಟು ಅದನ್ನು ದತ್ತು ತೆಗೆದುಕೊಂಡು ಪೋಷಿಸುವಂತೆ ಪ್ರೇರೇಪಿಸಲಾಗುವುದು.
ಈ ಯೋಜನೆಗಳ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜಲಸಂಪತ್ತು ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.