ಪದ್ಮಶ್ರೀ ಪುರಸ್ಕೃತೆ, ವೃಕ್ಷಗಳನ್ನೇ ಮಕ್ಕಳಂತೆ ಪೋಷಿಸಿ, ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ ಜಗತ್ತಿಗೆ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಈಗ ಚಲನಚಿತ್ರದ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ., ಎ. ಸಂತೋಷ್ ಮುರಳಿ ಹಾಗೂ ಒರಟ ಶ್ರೀ ನಿರ್ಮಾಣದ ಈ ಚಿತ್ರವು ಡಾ. ನೆಲ್ಲಿ ಕಟ್ಟೆ ಎಸ್. ಸಿದ್ದೇಶ್ ಅವರ “ವೃಕ್ಷಮಾತೆ ಸಾಲುಮರದ ತಿಮ್ಮಕ್ಕ” ಕೃತಿಯನ್ನು ಆಧರಿಸಿದೆ.
ತಿಮ್ಮಕ್ಕ ಪಾತ್ರದಲ್ಲಿ ಸೌಜನ್ಯ, ನಿರ್ದೇಶನ ಒರಟ ಶ್ರೀ
“ಒರಟ ಐ ಲವ್ ಯು” ಚಿತ್ರದ ಮೂಲಕ ಖ್ಯಾತರಾದ ಒರಟ ಶ್ರೀ ಈ ಚಿತ್ರದ ನಿರ್ದೇಶಕರಾಗಿದ್ದು, ಮೊದಲ ಬಾರಿಗೆ ಕಲಾತ್ಮಕ ಚಿತ್ರಕ್ಕೆ ಕೈ ಹಾಕಿದ್ದಾರೆ. ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ನಟಿ ಸೌಜನ್ಯ ಅಭಿನಯಿಸುತ್ತಿದ್ದಾರೆ. ತಿಮ್ಮಕ್ಕನ ಗಂಡನ ಪಾತ್ರವನ್ನು ನೀನಾಸಂ ಅಶ್ವಥ್ ನಿರ್ವಹಿಸುತ್ತಿದ್ದು, ಎಂ.ಕೆ. ಮಠ, ಗಣೇಶ್ ಕೆ. ಸರ್ಕಾರ್, ದೀಪ ಡಿ.ಕೆ., ಅಂಜನಮ್ಮ, ಭೂಮಿಕಾ, ಪ್ರಕಾಶ್ ಶೆಟ್ಟಿ, ಮನು ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ತುಮಕೂರಿನಲ್ಲಿ ಚಿತ್ರೀಕರಣ ಆರಂಭ
ಚಿತ್ರದ ಚಿತ್ರೀಕರಣ ಇತ್ತೀಚೆಗೆ ತುಮಕೂರು ಜಿಲ್ಲೆಯ ಹುಲಿಕಲ್ ಮತ್ತು ಮಧುಗಿರಿಯ ಸುತ್ತಮುತ್ತ ಆರಂಭವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮುಂದಿನ ವಾರದಿಂದ ಎರಡನೇ ಶೆಡ್ಯೂಲ್ ಶುರುವಾಗಲಿದೆ.
ತಾಂತ್ರಿಕ ತಂಡ
ಚಿತ್ರಕ್ಕೆ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ, ಶ್ಯಾಮ್ ಸಂಗೀತ ನಿರ್ದೇಶನವಿದೆ. ಸಂಭಾಷಣೆ ಮತ್ತು ಸಾಹಿತ್ಯವನ್ನು ಡಾ. ನೆಲ್ಲಿ ಕಟ್ಟೆ ಸಿದ್ದೇಶ್ ಮತ್ತು ಒರಟ ಶ್ರೀ ಬರೆದಿದ್ದಾರೆ.
ಶೀರ್ಷಿಕೆ ಅನಾವರಣ
ಇತ್ತೀಚೆಗೆ ಚಿತ್ರದ ಶೀರ್ಷಿಕೆಯನ್ನು ಹಿರಿಯ ಬರಹಗಾರ್ತಿ, ಪತ್ರಕರ್ತೆ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಬಾಯಿ ಅನಾವರಣಗೊಳಿಸಿದ್ದಾರೆ.
ವೃಕ್ಷಮಾತೆಯ ಜೀವನದ ಪ್ರೇರಕ ಕಥೆಯನ್ನು ತೆರೆಯ ಮೇಲೆ ತರುವ ಈ ಚಿತ್ರ, ಪರಿಸರ ಸಂರಕ್ಷಣೆಯ ಜೊತೆಗೆ ತಿಮ್ಮಕ್ಕನವರ ಸಾಧನೆಗೆ ಸಾರ್ಥಕ ನಮನವಾಗಲಿದೆ ಎಂಬ ನಿರೀಕ್ಷೆಯಿದೆ.












