ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಈ ಸಂತಸದ ಸಂದರ್ಭದಲ್ಲಿ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ದಾಖಲೆಯ ಪ್ರಮಾಣಪತ್ರ ಮತ್ತು ಮೆಡಲ್ ಅನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ತೋರಿಸಿದರು.
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಈ ಸಾಧನೆಗೆ ಬಹಳ ಸಂತೋಷ ವ್ಯಕ್ತಪಡಿಸಿ, ಸಾರಿಗೆ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸೇರಿದಂತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಶಕ್ತಿ ಯೋಜನೆಯು ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ದಿಟ್ಟ ಕ್ರಮವಾಗಿದ್ದು, ಇದು ಮಹಿಳೆಯರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದ್ದು, ಇದು ರಾಜ್ಯದಾದ್ಯಂತ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.
ಈ ಸಂದರ್ಭದಲ್ಲಿ ಮಾನ್ಯ ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್, ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಶ್ರೀ ಎಚ್.ಎಂ. ರೇವಣ್ಣ, ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಶ್ರೀ ದಿನೇಶ್ ಗೂಳಿಗೌಡ ಹಾಗೂ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಕ್ರಂ ಪಾಷ ಭಾಆಸೇ ಉಪಸ್ಥಿತರಿದ್ದರು.
ಈ ಸಾಧನೆಯು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಮತ್ತೊಂದು ಮೈಲಿಗಲ್ಲಾಗಿದ್ದು, ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿದೆ.