ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ “ಶಕ್ತಿ” ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣ 500 ಕೋಟಿ ಟ್ರಿಪ್‌ಗಳ ಮೈಲಿಗಲ್ಲನ್ನು ತಲುಪಿದ್ದು, ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಸನ್ನಿವೇಶದಲ್ಲಿ ಸೋಮವಾರ ಬೆಂಗಳೂರಿನ ವಿಂಡ್ಸರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು 500 ಕೋಟಿಯ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ವಿತರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, “ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಜನತೆ ಮತ್ತು ದೇವರು ನಮಗೆ ಅಧಿಕಾರ ನೀಡುವವರೆಗೆ ಈ ಯೋಜನೆಗಳು ಮುಂದುವರಿಯುತ್ತವೆ” ಎಂದು ಸ್ಪಷ್ಟಪಡಿಸಿದರು.
“ಕಾಂಗ್ರೆಸ್ ಪಕ್ಷವು ದೇಶದ ಜನತೆಗೆ ಹಲವಾರು ಕಲ್ಯಾಣಕಾರಿ ಯೋಜನೆಗಳನ್ನು ಒದಗಿಸಿದೆ. ನರೇಗಾ, ಬ್ಯಾಂಕ್ ರಾಷ್ಟ್ರೀಕರಣ, ಪಿಂಚಣಿ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಇವು ಜನರ ಬದುಕಿಗೆ ಅತ್ಯಗತ್ಯವಾದ ಕಾರ್ಯಕ್ರಮಗಳಾಗಿದ್ದು, ಶಾಶ್ವತವಾಗಿ ಮುಂದುವರಿಯುತ್ತವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಆರ್ಥಿಕ ಉಳಿತಾಯ
“ಶಕ್ತಿ ಯೋಜನೆಯಿಂದ ರಾಜ್ಯದಾದ್ಯಂತ ಮಹಿಳೆಯರು ಉಚಿತವಾಗಿ ಸಂಚರಿಸಬಹುದು. ತಮ್ಮ ಸಂಬಂಧಿಕರ ಮನೆಗೆ, ಕೆಲಸದ ಸ್ಥಳಗಳಿಗೆ ಯಾವುದೇ ಖರ್ಚಿಲ್ಲದೇ ತೆರಳಬಹುದು. ಕೆಲಸಕ್ಕೆ ತೆರಳುವ ಮಹಿಳೆಯರಿಗೆ ತಿಂಗಳಿಗೆ 500 ರಿಂದ 1,000 ರೂ.ಗಿಂತಲೂ ಹೆಚ್ಚು ಹಣ ಉಳಿತಾಯವಾಗುತ್ತಿದೆ” ಎಂದು ಶಿವಕುಮಾರ್ ತಿಳಿಸಿದರು.
“ಒಬ್ಬ ಮಹಿಳೆಯೊಬ್ಬರು ಸಂತೋಷದಿಂದ ರೊಟ್ಟಿ ಮತ್ತು ಶೇಂಗಾ ಹೋಳಿಗೆ ನೀಡಿದರು. ಈ ಯೋಜನೆಯ ಬಗ್ಗೆ ಎಷ್ಟೇ ಟೀಕೆಗಳು ಬಂದರೂ, ಅವು ಕಾಲಕ್ರಮೇಣ ಮರೆಯಾಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಜನರಿಗೆ ನೀಡಿದ ಮಾತನ್ನು ಈಡೇರಿಸಿರುವುದರಿಂದ ನಮಗೆ ಸಂತಸವಾಗಿದೆ” ಎಂದು ಅವರು ಹೇಳಿದರು.
ಸಿಗಂದೂರು ತೂಗುಸೇತುವೆ ವಿವಾದ
ಇದಕ್ಕೂ ಮುನ್ನ, ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಸಿಗಂದೂರು ತೂಗುಸೇತುವೆ ಉದ್ಘಾಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. “ರಾಜ್ಯದ ಮುಖ್ಯಮಂತ್ರಿಗಳಿಗೆ ಮುಂಚಿತವಾಗಿ ತಿಳಿಸಬೇಕಿತ್ತು. ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳು ಪತ್ರ ಬರೆದು ತಿಳಿಸಿದ್ದಾರೆ. ಇಂದು ಇಂಡಿ ತಾಲ್ಲೂಕಿನಲ್ಲಿ ನಡೆದ ಕಾರ್ಯಕ್ರಮವೂ ಮಹತ್ವದ್ದಾಗಿತ್ತು. ನೀರಾವರಿ ಇಲಾಖೆಯಿಂದ 2,000 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವನ್ನು ಒದಗಿಸಲಾಗುತ್ತಿದೆ” ಎಂದು ಅವರು ವಿವರಿಸಿದರು.
ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ, “ಈ ರಾಜಕೀಯ ವಿಷಯವನ್ನು ಆನಂತರ ಮಾತನಾಡೋಣ” ಎಂದು ಡಿಸಿಎಂ ಉತ್ತರಿಸಿದರು.