‘ಕಾಂತಾರ: ಅಧ್ಯಾಯ 1’ ತೆರೆಮರೆಯ ವಿಶೇಷ ಪ್ರದರ್ಶನ
ಬೆಂಗಳೂರು:ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ ಅಸೋಸಿಯೇಷನ್ (ABAI) ಸಹಯೋಗದೊಂದಿಗೆ 2026ರ ಫೆಬ್ರವರಿ 27ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ 7ನೇ ಆವೃತ್ತಿಯ ಬೆಂಗಳೂರು ಜಿ.ಎ.ಎಫ್.ಎಕ್ಸ್ (GAFX 2026) ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಈ ಮೂರು ದಿನಗಳ ಶೃಂಗಸಭೆಯು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ (VFX), ಗೇಮಿಂಗ್, ಕಾಮಿಕ್ಸ್, XR ಮತ್ತು ತಲ್ಲೀನಗೊಳಿಸುವ ಮಾಧ್ಯಮಗಳ ಕ್ಷೇತ್ರದ ಸೃಷ್ಟಿಕರ್ತರು, ಸ್ಟುಡಿಯೋಗಳು ಹಾಗೂ ಉದ್ಯಮ ನಾಯಕರನ್ನು ಒಗ್ಗೂಡಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೃಂಗಸಭೆಯನ್ನು ಉದ್ಘಾಟಿಸಲಿದ್ದು, ಗೌರವಾನ್ವಿತ ಅತಿಥಿಗಳಾಗಿ IDGS ಅಧ್ಯಕ್ಷರು ಮತ್ತು ಜೆಟ್ಸಿಂಥೆಸಿಸ್ ಸ್ಥಾಪಕ ಹಾಗೂ ಸಿಇಒ ಶ್ರೀ ರಾಜನ್ ನವನಿ, ನಟ-ನಿರ್ದೇಶಕ-ನಿರ್ಮಾಪಕ ಸುದೀಪ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಬಾರಿ ಮೊದಲ ಬಾರಿಗೆ GAFX ಶೃಂಗಸಭೆಯಲ್ಲಿ ವಿಶೇಷ ತೆರೆಮರೆಯ (ಬಿಹೈಂಡ್-ದಿ-ಸೀನ್ಸ್) ಸೆಷನ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. DNEG ಅವರ ಆಸ್ಕರ್ ನಾಮನಿರ್ದೇಶಿತ ಕಿರುಚಿತ್ರ ‘ಕಾರ್ಡ್‌ಬೋರ್ಡ್’ನ ಆಳವಾದ ಅಧ್ಯಯನ, ಆಸ್ಕರ್ ನಾಮನಿರ್ದೇಶಿತ ‘ದಿ ಲಾಸ್ಟ್ ವರ್ಲ್ಡ್’ ಅಧಿವೇಶನ, “ಡೆಡ್‌ಪೂಲ್ & ವೊಲ್ವೆರಿನ್: ದಿ ಆರ್ಟ್ ಆಫ್ ಬ್ಲಡ್ ಅಂಡ್ ಗಟ್ಸ್” ಮತ್ತು ನೆಟ್‌ಫ್ಲಿಕ್ಸ್‌ನ ಹಿಟ್ ಅನಿಮೇಟೆಡ್ ಶೋ ‘ಕುರುಕ್ಷೇತ್ರ’ ಸೇರಿದಂತೆ ಹಲವು ತೆರೆಮರೆಯ ಸೆಷನ್‌ಗಳಿರುತ್ತವೆ.
ವಿಶೇಷವಾಗಿ, ‘ಕಾಂತಾರ: ಅಧ್ಯಾಯ 1’ ಚಿತ್ರದ ವಿಶೇಷ ನೋಟ (ಸ್ಪೆಷಲ್ ಲುಕ್) ಪ್ರದರ್ಶನವೂ ಇರುತ್ತದೆ. AI-ಚಾಲಿತ ಉತ್ಪಾದನಾ ಪೈಪ್‌ಲೈನ್‌ಗಳು, ಅನಿಮೇಷನ್, VFX ಮತ್ತು ಗೇಮಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆಯೂ ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಈ ಶೃಂಗಸಭೆಯು AVGC-XR (ಅನಿಮೇಷನ್, VFX, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ) ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.












