ಕಲಬುರ್ಗಿ: “ಪೂಜ್ಯ ಶರಣಬಸವೇಶ್ವರ ಅಪ್ಪಾಜಿಯವರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಜನಸೇವೆಯ ಮೂಲಕ ಧೀಮಂತ ಶರಣರಾಗಿ ಗುರುತಿಸಿಕೊಂಡವರು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಅಪ್ಪಾಜಿಯವರ ಪಾರ್ಥಿವ ಶರೀರಕ್ಕೆ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ಆಗಮಿಸಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯ್ ಸಿಂಗ್ ಮತ್ತಿತರರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಿದ ನಂತರ ಶಿವಕುಮಾರ್ ಅವರು ಅಪ್ಪಾಜಿಯವರ ಕುಟುಂಬಕ್ಕೆ ರಾಷ್ಟ್ರಧ್ವಜವನ್ನು ಅರ್ಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಈ ಹಿಂದೆ ಕಲಬುರ್ಗಿಗೆ ಬಂದಾಗ ಅಪ್ಪಾಜಿಯವರನ್ನು ಭೇಟಿಯಾಗಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂದರ್ಭದಲ್ಲಿ ತೆರಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ನಮ್ಮ ಸರ್ಕಾರವು ಅಪ್ಪಾಜಿಯವರ ಕುಟುಂಬ ಮತ್ತು ಅನುಯಾಯಿಗಳ ಜೊತೆ ದೃಢವಾಗಿ ನಿಲ್ಲಲಿದೆ. ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು ಅಪ್ಪಾಜಿಯವರ ಕುಟುಂಬಕ್ಕೆ ರಾಷ್ಟ್ರಧ್ವಜವನ್ನು ಅರ್ಪಿಸಿದ್ದೇವೆ. ಇದು ಎಲ್ಲರಿಗೂ ಸಿಗದ ಗೌರವ” ಎಂದರು.
“ಅಪ್ಪಾಜಿಯವರ ಸಾಧನೆಗಳಿಗೆ ಸರ್ಕಾರವು ಗೌರವ ಸಲ್ಲಿಸಿದೆ. ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಈ ಐತಿಹಾಸಿಕ ಮಠವನ್ನು ಕಾಪಾಡಿಕೊಂಡು ಮುಂದುವರೆಸಲು ಎಲ್ಲಾ ಭಕ್ತಾದಿಗಳಲ್ಲಿ ಮನವಿ ಮಾಡುತ್ತೇನೆ. ನೀವು ನಿಮ್ಮ ಮನೆಗಳನ್ನು ಹೇಗೆ ಕಾಪಾಡುತ್ತೀರೋ, ಅದೇ ರೀತಿ ಈ ಮಠವನ್ನೂ ಕಾಪಾಡಿಕೊಳ್ಳಿ” ಎಂದು ಶಿವಕುಮಾರ್ ಭಕ್ತರಲ್ಲಿ ಕೋರಿದರು.