ಬೆಂಗಳೂರು: ವಿಧಾನಸಭೆಯಲ್ಲಿ ಅಮಾನತುಗೊಂಡ 18 ಶಾಸಕರ ವಿರುದ್ಧದ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ. ಆದೇಶವನ್ನು ವಾಪಸ್ ಪಡೆಯದೆ ಹೋದರೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಸ್ಲಿಂ ಮೀಸಲಾತಿ ಮತ್ತು ಹನಿಟ್ರ್ಯಾಪ್ ಪ್ರಕರಣದ ವಿರುದ್ಧ 18 ಶಾಸಕರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ಅಥವಾ ಎಸ್ಐಟಿ ತನಿಖೆಗೆ ಒಪ್ಪಿಕೊಂಡಿದ್ದರೆ, ಸ್ಪಷ್ಟನೆ ನೀಡಿದ್ದರೆ, ಪ್ರತಿಭಟನೆಯನ್ನು ಕೈ ಬಿಡಬಹುದಿತ್ತು. ಆದರೆ ಸ್ಪೀಕರ್ ಯು.ಟಿ.ಖಾದರ್ ಯಾವುದೇ ಸೌಜನ್ಯ ತೋರದೆ ಅವರನ್ನು ಅಮಾನತು ಮಾಡಿಸಿದ್ದಾರೆ” ಎಂದರು.
ಸ್ಪೀಕರ್ ಮೇಲೆಯೇ ಗಂಭೀರ ಆರೋಪ
“ಸ್ಪೀಕರ್ ಯು.ಟಿ.ಖಾದರ್, ಕಾಂಗ್ರೆಸ್ ಸರ್ಕಾರದ ಪರವಾಗಿ ನಿಂತು ವಿರೋಧ ಪಕ್ಷದ ಶಾಸಕರನ್ನು ಟಾರ್ಗೆಟ್ ಮಾಡಿದ್ದಾರೆ. ಸಚಿವ ಸಂಪುಟ ಪುನರ್‌ರಚನೆಯಾಗಲು ಸಿದ್ಧತೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಈ ಕ್ರಮ ಕೈಗೊಂಡರೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಅವರಿಗಿದೆ. ಸಭಾಧ್ಯಕ್ಷರ ಸ್ಥಾನ ಬಹಳ ಪವಿತ್ರ. ಆದರೆ, ವಿರೋಧ ಪಕ್ಷದ ಶಾಸಕರು ಪೀಠದ ಬಳಿ ಬಂದು ಪ್ರತಿಭಟನೆ ಮಾಡಿದರೆ ಅವರನ್ನು ಅಮಾನತು ಮಾಡಲಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಅಮಾನತು ಆದೇಶ ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ, ಬಿಜೆಪಿ ಉಗ್ರ ಹೋರಾಟ ನಡೆಸಲಿದೆ” ಎಂದು ಎಚ್ಚರಿಕೆ ನೀಡಿದರು.