ಬಿಜೆಪಿ ಮೊದಲು ತಮ್ಮ ಪಕ್ಷದ ಗೊಂದಲ ಸರಿಪಡಿಸಿಕೊಳ್ಳಲಿ
ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸಿದ್ದು ಬಿಜೆಪಿಯೇ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಶಾಸಕರ ಸಭೆ ಕರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಶಾಸಕರನ್ನು ಭೇಟಿಯಾದ ಬಳಿಕ, ಶಾಸಕರ ಅಹವಾಲುಗಳ ಕುರಿತು ಸಿಎಂಗೆ ವಿವರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಶಾಸಕರ ಸಭೆ ಕರೆದಿದ್ದಾರೆ. ಇದರಲ್ಲಿ ತಪ್ಪೇನಿದೆ? ಈ ವಿಷಯದಲ್ಲಿ ನನಗೆ ಯಾವುದೇ ಆಕ್ಷೇಪವಿಲ್ಲ. ಮಾಧ್ಯಮಗಳಿಗೆ ಏಕೆ ಕಷ್ಟವಾಗುತ್ತಿದೆ?” ಎಂದು ಪ್ರಶ್ನಿಸಿದರು.
ಡಿಸಿಎಂಗೆ ಆಹ್ವಾನವಿಲ್ಲದಿರುವ ಬಗ್ಗೆ:
ನೀವು ಕೆಪಿಸಿಸಿ ಅಧ್ಯಕ್ಷರು ಮತ್ತು ಡಿಸಿಎಂ ಆಗಿದ್ದರೂ ಶಾಸಕರ ಸಭೆಗೆ ಆಹ್ವಾನ ನೀಡಿಲ್ಲ ಎಂದು ಕೇಳಿದಾಗ, “ನನಗೆ ಇದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಪ್ರತ್ಯೇಕ ಅಜೆಂಡಾ ರೂಪಿಸಿದ್ದೇವೆ. ಈ ಬಗ್ಗೆ ನಂತರ ಚರ್ಚಿಸುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ನಾನೂ ಕೆಲವು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಗೆ ತಿರುಗೇಟು:
ಸಿಎಂ ಡಿಸಿಎಂಗೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಬಿಜೆಪಿಯವರು ಮೊದಲು ತಮ್ಮ ಪಕ್ಷದ ಗೊಂದಲವನ್ನು ಸರಿಪಡಿಸಿಕೊಳ್ಳಲಿ. ಅವರ ಪಕ್ಷದೊಳಗೆ ಸಾಕಷ್ಟು ಮೇಲಾಟಗಳು, ತಿಕ್ಕಾಟಗಳು ನಡೆಯುತ್ತಿವೆ. ಅವರ ನಾಯಕರ ಹೇಳಿಕೆಗಳನ್ನು ಎಲ್ಲರೂ ನೋಡಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ,” ಎಂದು ತಿರುಗೇಟು ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ:
“ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಮುಂದಾಗಿದ್ದೇವೆ. ಈ ಕುರಿತು ವಿರೋಧ ಪಕ್ಷದ ನಾಯಕರ ಅಭಿಪ್ರಾಯವನ್ನು ಪಡೆದಿದ್ದೇವೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕಿದೆ. ಬೆಂಗಳೂರು ಮತ್ತು ನಾಗರಿಕರ ಹಿತಕ್ಕಾಗಿ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ಭೌಗೋಳಿಕ, ಆಡಳಿತಾತ್ಮಕ, ಆರ್ಥಿಕ ಮತ್ತು ಭವಿಷ್ಯದ ಬೆಂಗಳೂರಿನ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ಟೀಕೆ ಮಾಡುತ್ತಾರೆ, ಮಾಡಲಿ. ನಾವು ಬೆಂಗಳೂರು ಮತ್ತು ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ,” ಎಂದರು.
ಮಲ್ಲಿಕಾರ್ಜುನ ಖರ್ಗೆಯವರ ಭಾವನೆಗೆ ತಪ್ಪಿಲ್ಲ:
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನ ತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಅವರು ಹಿರಿಯ ನಾಯಕರು. ಕಾಂಗ್ರೆಸ್‌ಗಾಗಿ ದುಡಿದವರು. ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ,” ಎಂದು ಶಿವಕುಮಾರ್ ಬೆಂಬಲಿಸಿದರು. ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಚರ್ಚೆಯಾದರೆ, “ಅದರ ಬಗ್ಗೆ ಚರ್ಚಿಸುವುದರಲ್ಲಿ ತಪ್ಪೇನಿಲ್ಲ. ಅವರವರ ಅಭಿಪ್ರಾಯವನ್ನು ಹೇಳಿಕೊಳ್ಳಬಹುದು,” ಎಂದರು.
ಗೊಬ್ಬರ ಕೊರತೆ ಆರೋಪಕ್ಕೆ ಖಾರವಾಗಿ ಉತ್ತರ:
ಯೂರಿಯ ಕೊರತೆ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಘೋಷಿಸಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡಿಕೊಳ್ಳಲಿ. ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದ್ದು ಬಿಜೆಪಿಯೇ. ನಾವು ಅಂತಹ ಕೆಲಸ ಮಾಡುವುದಿಲ್ಲ. ಮಳೆಯಿಂದಾಗಿ ಕೃಷಿ ಚಟುವಟಿಕೆ ಹೆಚ್ಚಾಗಿದ್ದು, ರಸಗೊಬ್ಬರಕ್ಕೆ ಬೇಡಿಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ಗೊಬ್ಬರ ಪೂರೈಸಬೇಕೆಂದು ಒತ್ತಾಯಿಸಿದ್ದೇವೆ. ಗೊಬ್ಬರ ಒದಗಿಸಿದರೆ ರೈತರಿಗೆ ಒಳ್ಳೆಯದಾಗುತ್ತದೆ,” ಎಂದರು.
“ಬಿಜೆಪಿಯ ಕೇಂದ್ರ ಕೃಷಿ ಸಚಿವರು, ರಾಸಾಯನಿಕ ಗೊಬ್ಬರ ಖಾತೆ ಸಚಿವರ ವಿರುದ್ಧ ಪ್ರತಿಭಟನೆ ಮಾಡಲಿ. ಗೊಬ್ಬರ ಕಾರ್ಖಾನೆಯನ್ನು ನಾವೇನು ನಡೆಸುತ್ತಿದ್ದೇವೆಯೇ? ಕೇಂದ್ರ ಕೊಡುವ ಗೊಬ್ಬರವನ್ನು ನಾವು ಹಂಚುತ್ತೇವೆ. ಹಂಚಿಕೆಯಲ್ಲಿ ತಾರತಮ್ಯ ಮಾಡಿದರೆ ಆರೋಪ ಮಾಡಲಿ. ಎಲ್ಲ ಲೆಕ್ಕವೂ ನಮ್ಮ ಬಳಿಯಿದೆ. ಯಾವ ಜಿಲ್ಲೆಗೆ ಎಷ್ಟು ಗೊಬ್ಬರ ಹಂಚಲಾಗಿದೆ ಎಂಬ ವಿವರವಿದೆ. ಬಿಜೆಪಿಯವರು ಪರಿಶೀಲನೆ ಮಾಡಲಿ,” ಎಂದು ಸವಾಲು ಹಾಕಿದರು.
ನಾವು ರೈತರ ವಿರುದ್ಧವಲ್ಲ:
“ನಾವು ರೈತರ ವಿರುದ್ಧ ಎಂದೂ ಹೋಗಿಲ್ಲ, ಇನ್ನು ಮುಂದೆಯೂ ಹೋಗುವುದಿಲ್ಲ. ರಾಜ್ಯದ ಹಿತಕ್ಕಾಗಿ, ರೈತರ ಒಳಿತಿಗಾಗಿ ಕೆಲಸ ಮಾಡುತ್ತೇವೆ,” ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.