ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಲಿಂಗಾಯತ ಸಮುದಾಯದ ಸರ್ವೆ ಕುರಿತಾಗಿ ಗಂಭೀರವಾದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಮೂಲಕ ಸರ್ವೆ ವರದಿಗಳನ್ನು ನೋಡಿ ಮಾತನಾಡಿದ ಅವರು, “ಎಷ್ಟರ ಮಟ್ಟಿಗೆ ಈ ವರದಿ ಸರಿಯಾದದು ಅಥವಾ ತಪ್ಪಾಗಿದೆ ಎಂಬುದು ಸ್ಪಷ್ಟವಿಲ್ಲ” ಎಂದರು.
ಲಿಂಗಾಯತ ಸಮುದಾಯದಲ್ಲಿ ವೀರಶೈವ ಲಿಂಗಾಯತ ಎಂಬ ಪ್ರಭೇದವಿದ್ದು, ಅದರಲ್ಲಿ ಹಲವು ಉಪಪಂಗಡಗಳಿವೆ – ರೆಡ್ಡಿ, ಬಣಜಿಗ, ಪಂಚಮಸಾಲಿ, ಹಡಪದ ಮುಂತಾದವು. ಈ ಉಪಪಂಗಡಗಳ ವ್ಯಕ್ತಿಗಳು ಸರ್ವೆ ವೇಳೆ ತಮಗೆ ತಾವು ಯಾವ ಜಾತಿಗೆ ಸೇರಿದ್ದಾರೆ ಎಂಬುದನ್ನು ಬರೆಸಿಕೊಂಡಿದ್ದಾರೆ. ಕೆಲವರು ‘ವೀರಶೈವ ಲಿಂಗಾಯತ’, ಇನ್ನು ಕೆಲವರು ‘ವೀರಶೈವ ಪಂಚಮಸಾಲಿ’, ಇನ್ನೂ ಕೆಲವರು ‘ವೀರಶೈವ ಬಣಜಿಗ’ ಅಥವಾ ‘ವೀರಶೈವ ಲಿಂಗಾಯತ ರೆಡ್ಡಿ’ ಎಂದು ಬರೆಸಿದ್ದಾರೆ ಎಂದು ಅವರು ತಿಳಿಸಿದರು.
“ಇಲ್ಲಿ ಮುಖ್ಯ ಸಮಸ್ಯೆ ಎಂದ್ರೆ – ಸರ್ವೆ ಮಾಡುವ ತಂಡ ತಾನು ಭೇಟಿ ಕೊಟ್ಟ ಮನೆಗಳಲ್ಲಿ ಇದ್ದವರನ್ನು ಕೇಳಿ, ಅವರೇ ಹೇಳಿದ ಜಾತಿಯನ್ನು ದಾಖಲಿಸಿದ್ದಾರೆ. ಇದರೊಂದಿಗೆ ಸ್ಪಷ್ಟತೆ ಇಲ್ಲದೆ ವರದಿ ಮಾಡಲಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸವದಿ ಅವರು ಮುಂದುವರೆದು ಹೇಳಿದರು: “ಜಿಲ್ಲಾವಾರು ಸರ್ವೆ ಮಾಡಲು ಮೊದಲು ಟೆಂಡರ್ ನೀಡಲಾಗಿತ್ತು. ಆದರೆ ಅದನ್ನು ಪಡೆದವರು ಸಮರ್ಪಕವಾಗಿ ಕೆಲಸ ಮಾಡಿಲ್ಲ. ಅಂಗನವಾಡಿ ಟೀಚರ್‌ಗಳ ಮೂಲಕ ಸರ್ವೆ ಮಾಡಿಸಿದ್ದಾರೆ. ನಾನು ಆ ಸಮಯದಲ್ಲಿಯೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ.”
“ಅವರು ಯಾರನ್ನಾದರೂ ಕರೆದು, ವೋಟರ್ ಲಿಸ್ಟ್ ತೆಗೆದು, ಒಂದು ಕಡೆ ಕೂತುಕೊಂಡು ‘ಇವರು ಯಾವ ಜಾತಿ’ ಅಂತ ಬರೆಸಿದ್ದಾರೆ. ಕೆಲವೊಂದು ಮನೆಗಳಿಗೆ ಮಾತ್ರ ಹೋಗಿದ್ದಾರೆ. ಇದು ಸಮಗ್ರ ಸರ್ವೆ ಅಲ್ಲ” ಎಂದು ತೀವ್ರ ಗಂಭೀರತೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
“ಈ ವಿಷಯದ ಸತ್ಯಾಸತ್ಯತೆ ನನಗೆ ಸಂಪೂರ್ಣವಾಗಿ ತಿಳಿಯಬೇಕಾದರೆ, ನನ್ನ ಕೈಗೆ ಕ್ಷೇತ್ರದ ಸಂಪೂರ್ಣ ವರದಿ ಬರಬೇಕು. ಅಂದರೆ, ಆಗ ಮಾತ್ರ ನಿಜವಾಗಿ ಎಷ್ಟು ನಿಖರತೆ ಇದೆ ಎಂಬುದು ಗೊತ್ತಾಗುವುದು” ಎಂದು ಸವದಿ ಕೊನೆಗೆ ಹೇಳಿದರು.












