ಕೋಲಾರದಲ್ಲಿ ಕಳೆದ ಎಂಟು ದಿನಗಳ ಹಿಂದೆಯಷ್ಟೇ ನಡೆದ ಸರಣಿ ಕಳ್ಳತನಗಳ ಬೆನ್ನ ಹಿಂದೆಯೇ, ನೆನ್ನೆ ಸಂಜೆ ಶಾಲೆಯಿಂದ ಮನೆಯತ್ತ ಮರಳುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಚೊಕ್ಕಹಳ್ಳಿ ಚಿನ್ನಯ ಶಾಲೆಯ ಶಿಕ್ಷಕಿ ಪರಿಮಳ ಎಂಬಾಕೆ ಎಂದಿನಂತೆ ಶಾಲೆ ಮುಗಿಸಿ ಶಾಲಾ ಬಸ್ ನಲ್ಲಿ ಟೇಕಲ್ ಮುಖ್ಯ ರಸ್ತೆಯಲ್ಲಿ ಇಳಿದು ಐದನೇ ಕ್ರಾಸ್ ನಲ್ಲಿರುವ ತಮ್ಮ ಮನೆಯತ್ತ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆಕೆಯ ಕತ್ತಿನಲ್ಲಿದ್ದ ಸುಮಾರು 55 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸರಕ್ಕೆ ಕೈ ಹಾಕಿ ಕಿತ್ತ ರಭಸಕ್ಕೆ ಆಕೆ ನೆಲಕ್ಕೆ ಬಿದ್ದು ಮತ್ತೆ ಎದ್ದು ಕಳ್ಳ ಕಳ್ಳ ಎಂದು ಕೂಗಾಡುವಷ್ಟರಲ್ಲಿ ಸರಗಳ್ಳರು ಮುಖ್ಯ ರಸ್ತೆಯತ್ತ ಹೊರಟು ಪರಾರಿಯಾಗಿದ್ದಾರೆ.
ನಂಬರ್ ಪ್ಲೇಟ್ ಸಹ ಇಲ್ಲದ ಪಲ್ಸರ್ ಬೈಕ್ ಇದಾಗಿದ್ದು ಇಬ್ಬರು ಯುವಕರು ಹೆಲ್ಮೆಟ್ ಧರಿಸಿದ್ದರೆನ್ನಲಾಗಿದೆ. ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳೆದ ವಾರವಷ್ಚೆ ನಗರದಲ್ಲಿ ನಡೆದ ಸರಣಿ ಅಂಗಡಿಗಳ ಕಳ್ಳತನದ ಬೆನ್ನ ಹಿಂದೆಯೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.