ವೈಚಾರಿಕತೆ, ವೈಜ್ಞಾನಿಕತೆ ಬೆಳೆಸುವುದೇ ಶಿಕ್ಷಣದ ಗುರಿ: ಶಿಕ್ಷಕರಿಗೆ-ಮಕ್ಕಳಿಗೆ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಕರೆ
ಬೆಂಗಳೂರು: ಶಿಕ್ಷಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಅವರು ಈ ವಿಷಯ ತಿಳಿಸಿದರು.
ಗುರುಗಳ ಸ್ಮರಣೆ: ತಮ್ಮ ಶಿಕ್ಷಣ ಜೀವನವನ್ನು ಸ್ಮರಿಸಿದ ಸಿಎಂ ಸಿದ್ದರಾಮಯ್ಯ, “ನಾನು ರಾಜಪ್ಪ ಮೇಸ್ಟ್ರಿಂದ ಶಾಲಾ ಶಿಕ್ಷಣವನ್ನೂ, ಪ್ರೊ. ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠವನ್ನೂ ಕಲಿತೆ” ಎಂದು ತಮ್ಮ ಗುರುಗಳಿಗೆ ಧನ್ಯವಾದ ಸಲ್ಲಿಸಿದರು.
ವೈಚಾರಿಕ ಶಿಕ್ಷಣದ ಗುರಿ: “ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣವಲ್ಲ. ಮಕ್ಕಳಲ್ಲಿ ಅರಿವಿನ ಕಿಡಿಯನ್ನು ಹೊತ್ತಿಸುವುದೇ ಶಿಕ್ಷಣದ ಉದ್ದೇಶ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ, ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಶಿಕ್ಷಣವೇ ನಮ್ಮ ಗುರಿ” ಎಂದು ಸಿಎಂ ಒತ್ತಿ ಹೇಳಿದರು. ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಮತ್ತು ಬ್ರಾತೃತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಮಾನವೀಯ ಸಮಾಜವನ್ನು ರೂಪಿಸಬಹುದು ಎಂದು ಶಿಕ್ಷಕರಿಗೆ ಕರೆ ನೀಡಿದರು.
ಜಾತಿ ವ್ಯವಸ್ಥೆಗೆ ಟೀಕೆ: ಜಾತಿ ವ್ಯವಸ್ಥೆಯಿಂದಾಗಿ ಅಸಮಾನ ಸಮಾಜ ನಿರ್ಮಾಣವಾಗಿದ್ದು, ಎಲ್ಲರಿಗೂ ಸಮಾನ ಅವಕಾಶ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಸಿಎಂ, “ಶಿಕ್ಷಣ ಕಲಿತರೂ ಜಾತಿ ಆಚರಣೆ, ಕಂದಾಚಾರ ಮತ್ತು ಮೌಡ್ಯದಲ್ಲಿ ತೊಡಗುವುದು ಶಿಕ್ಷಣಕ್ಕೆ ದ್ರೋಹ” ಎಂದರು. ವೈದ್ಯರು, ಪ್ರೊಫೆಸರ್‌ಗಳು, ಎಂಜಿನಿಯರ್‌ಗಳಂತಹ ಶಿಕ್ಷಿತರು ಕೂಡ ಜಾತಿ ಮತ್ತು ಮೌಡ್ಯವನ್ನು ಆಚರಿಸುವುದನ್ನು ಖಂಡಿಸಿದ ಅವರು, ಶಿಕ್ಷಕರು ವೈಚಾರಿಕತೆ, ವೈಜ್ಞಾನಿಕತೆ, ಮತ್ತು ಪರಧರ್ಮ ಸಹಿಷ್ಣುತೆಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ಸಾಧನೆಗೆ ಮೆಚ್ಚುಗೆ: ಒಂದು ಕಾಲದಲ್ಲಿ ಶೂದ್ರರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣದಿಂದ ವಂಚಿತರಾಗಿದ್ದರೂ, ಈಗ ಸಂವಿಧಾನದಿಂದ ಶಿಕ್ಷಣದ ಹಕ್ಕು ದೊರೆತಿರುವುದರಿಂದ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಉನ್ನತ ಶ್ರೇಣಿಗಳನ್ನು ಗಳಿಸುತ್ತಿರುವುದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಹಿನ್ನೆಲೆ: ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಆಹಾರದ ಕೊರತೆಯಿಂದ ಬಳಲಿದ್ದ ಅನುಭವವನ್ನು ನೆನಪಿಸಿಕೊಂಡ ಸಿಎಂ, “ಯಾರೂ ಆ ಸ್ಥಿತಿಯನ್ನು ಎದುರಿಸಬಾರದು ಎನ್ನುವ ಕಾರಣಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ” ಎಂದು ವಿವರಿಸಿದರು.
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಆದರ್ಶ: ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸಿದ ಸಿಎಂ, “ಅವರ ನೈತಿಕ ಮೌಲ್ಯಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಗೌರವ” ಎಂದರು.
ಮೊಬೈಲ್ ಬಿಡಿ, ಪುಸ್ತಕ ಹಿಡಿ: ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, “ಮೊಬೈಲ್ ಬಿಟ್ಟು ಪುಸ್ತಕವನ್ನು ಹಿಡಿಯಿರಿ” ಎಂದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕರೆ ನೀಡಿದರು. ಈ ಮೌಲ್ಯವನ್ನು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಜಾರಿಗೊಳಿಸುವಂತೆ ಸೂಚಿಸಿದರು.
ಸಾವಿತ್ರಿಬಾಯಿ ಫುಲೆ-ಫಾತಿಮಾ ಶೇಕ್ ಸ್ಮರಣೆ: ದಮನಿತ ಮಹಿಳೆಯರಿಗೆ ಶಿಕ್ಷಣ ನೀಡಿದ ಮೊದಲ ಶಿಕ್ಷಕಿಯರಾದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಅವರನ್ನು ಸ್ಮರಿಸಿದ ಸಿಎಂ, “ಅವಮಾನಗಳನ್ನು ಎದುರಿಸಿ ಶಿಕ್ಷಣದ ದೀವಿಗೆಯನ್ನು ಹೊತ್ತಿಸಿದ ಅವರ ಕೊಡುಗೆ ಅನನ್ಯ” ಎಂದು ಶ್ಲಾಘಿಸಿದರು.
ಯುವ ಸಚಿವರಿಗೆ ಶ್ಲಾಘನೆ: ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಎಂ.ಸಿ. ಸುಧಾಕರ್ ಅವರನ್ನು ಕ್ರಿಯಾಶೀಲ ಯುವ ಸಚಿವರು ಎಂದು ಕೊಂಡಾಡಿದ ಸಿಎಂ, “ಇವರು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ಇದೆ” ಎಂದರು.
ಶಿಕ್ಷಕರ ಹೊಣೆಗಾರಿಕೆ: “ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಡವಳಿಕೆ ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಆದ್ದರಿಂದ, ಶಿಕ್ಷಕರು ಉನ್ನತ ಮಾನವೀಯ ಮತ್ತು ನಾಗರಿಕ ಮೌಲ್ಯಗಳನ್ನು ಪಾಲಿಸಬೇಕು” ಎಂದು ಸಿಎಂ ಸಲಹೆ ನೀಡಿದರು.