ಬೆಂಗಳೂರು: ಭಾರತದ ಒಟ್ಟು ಉತ್ಪಾದನೆ ಮತ್ತು ರಫ್ತಿನಲ್ಲಿ ಶೇಕಡಾ 40ರಷ್ಟು ಪಾಲನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಹೊಂದಿವೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕಾರಂಡ್ಲಾಜೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ (ಎನ್‌ಎಸ್‌ಐಸಿ) ಮತ್ತು ಕಾಸಿಯಾ (KASSIA) ಆಯೋಜಿಸಿದ್ದ ಎಂಎಸ್‌ಎಂಇ ಮಾರ್ಕೆಟಿಂಗ್ ಸಮ್ಮಿಟ್‌ನ ಉದ್ಘಾಟನೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
ಕೃಷಿ, ಆಹಾರ, ರಕ್ಷಣೆ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಂತಹ ಎಲ್ಲಾ ಕ್ಷೇತ್ರಗಳ ಅಗತ್ಯಗಳನ್ನು ಎಂಎಸ್‌ಎಂಇಗಳು ಪೂರೈಸುತ್ತಿವೆ ಎಂದು ಸಚಿವರು ಒತ್ತಿ ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳ, ವಿಶೇಷವಾಗಿ ಎಂಎಸ್‌ಎಂಇಗಳ ಪಾತ್ರವು ಗಮನಾರ್ಹವಾಗಿದೆ. ಈ ಕ್ಷೇತ್ರವನ್ನು ಬಲಪಡಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮೊದಲ ಬಾರಿಗೆ ಕೌಶಲ್ಯ ತರಬೇತಿ ವಿಭಾಗವನ್ನು ಪ್ರಾರಂಭಿಸಿದೆ. ಇದು ಮಹಿಳೆಯರಿಗೆ ಮತ್ತು ಯುವಕರಿಗೆ ಜಾಗತಿಕ ಕೌಶಲ್ಯ ಮಾನದಂಡಗಳಿಗೆ ತಕ್ಕಂತೆ ತರಬೇತಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕೈಗೊಳ್ಳುತ್ತಿದೆ.

2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಸಚಿವರು ಪ್ರಕಟಿಸಿದರು, ಇದರಲ್ಲಿ ಎಂಎಸ್‌ಎಂಇ ಕ್ಷೇತ್ರದ ಕೊಡುಗೆ ಅಪಾರವಾಗಿದೆ. “ಸ್ವದೇಶಿ” ಮನೋಭಾವವನ್ನು ಬೆಳೆಸಿಕೊಂಡು, ದೇಶವನ್ನು ಆತ್ಮನಿರ್ಭರವನ್ನಾಗಿ ಮಾಡಲು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಕೊಡುಗೆಯನ್ನು ನೀಡಬೇಕು ಎಂದು ಅವರು ಕರೆ ನೀಡಿದರು. ಎಂಎಸ್‌ಎಂಇ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಮಾರುಕಟ್ಟೆಗಳನ್ನು ಉತ್ತೇಜಿಸಲಾಗುತ್ತಿದೆ ಮತ್ತು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಗಮಗೊಳಿಸಲಾಗಿದೆ. ಇದರಿಂದ ವ್ಯಾಪಾರ ಮಾಡುವಿಕೆ ಸುಲಭವಾಗಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವೂ ರಫ್ತು ಗುಣಮಟ್ಟದ್ದಾಗಿರಬೇಕು, ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುತ್ತದೆ ಎಂದು ಸಚಿವರು ಹೇಳಿದರು. ಹೆಚ್ಚಿನ ಸಾವಯವ ಆಹಾರ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಒತ್ತಿಹೇಳಿದರು.

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಶೀಘ್ರದಲ್ಲೇ ವಿಶ್ವದರ್ಜೆಯ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು. ಎಂಎಸ್‌ಎಂಇಗಳನ್ನು ಉತ್ತೇಜಿಸುತ್ತಿರುವ ಹಲವಾರು ಬ್ಯಾಂಕ್‌ಗಳು ಮತ್ತು ಕೈಗಾರಿಕಾ ಸಂಸ್ಥೆಗಳನ್ನು ಈ ಸಂದರ್ಭದಲ್ಲಿ ಪ್ರಶಂಸಿಸಲಾಯಿತು. ಎಂಎಸ್‌ಎಂಇ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಿರುವ ಉದ್ಯಮಿಗಳನ್ನು ಸನ್ಮಾನಿಸಲಾಯಿತು.
ಕಾಸಿಯಾದ ಉಪಾಧ್ಯಕ್ಷ ಶ್ರೀ ನಿಂಗಣ್ಣ ಬಿರಾದರ್, ಎಂಎಸ್‌ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅತಿಶ್ ಕುಮಾರ್ ಸಿಂಗ್, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ (ಎನ್‌ಎಸ್‌ಐಸಿ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಸುಭ್ರಾಂಶು ಶೇಖರ್ ಆಚಾರ್ಯ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.