ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಕಾಂಗ್ರೆಸ್ ಶಾಸಕ ತಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ವೇಳೆ, ತಮ್ಮಯ್ಯ ಮತ್ತು ಜಾರ್ಜ್ ನಡುವೆ ಮಾತಿನ ಚಕಮಕಿ ನಡೆಯಿತು.
ಜಾರ್ಜ್ ಅವರ ಜೊತೆ ಪ್ರತ್ಯೇಕವಾಗಿ ಮಾತನಾಡಲು ಸಮಯ ಕೇಳಿದ ತಮ್ಮಯ್ಯಗೆ, “ಏನಾದರೂ ಇದ್ರೆ ಇಲ್ಲೇ ಹೇಳಿ” ಎಂದು ಸಚಿವರು ಪ್ರತಿಕ್ರಿಯಿಸಿದರೆ, ಇದು ಬಹಿರಂಗ ಹೇಳಿಕೆ ನೀಡುವ ಸರಿಯಾದ ವೇದಿಕೆ ಅಲ್ಲ ಎಂದ ತಮ್ಮಯ್ಯ. ಆದರೆ, ಸಚಿವರು ಅದನ್ನು ತಳ್ಳಿ ಹಾಕುತ್ತ, “ನಿಮಗೆ ಬೇಕಾದ್ದನ್ನು ನೀವೇ ಕೇಳಿ ಪಡೆದುಕೊಳ್ಳಿ” ಎಂದು ಉತ್ತರಿಸಿದರು.
ಈ ಮಾತಿಗೆ ತೀವ್ರ ಅಸಮಾಧಾನಗೊಂಡ ತಮ್ಮಯ್ಯ, “ನಾವು ಕೂಡ ಕಾಂಗ್ರೆಸ್ ಶಾಸಕರೇ, ಸರ್ಕಾರದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಅವಶ್ಯಕತೆ ನಿಮಗೆ ಇಲ್ಲವೇ?” ಎಂದು ಪ್ರಶ್ನಿಸಿದರು. ತೀವ್ರ ವಾಗ್ವಾದದ ಬಳಿಕ, ತಮ್ಮಯ್ಯ ಕೋಪಗೊಂಡು, “ನಮಗೆ ಬೇಕಾದ್ದನ್ನು ನಾವು ಮಾಡುತ್ತೇವೆ” ಎಂದರೆ, ಸಚಿವರು ಕೂಡ ಗರಂ ಆಗಿ, “ನಿಮ್ಮನ್ನ ಮುಂದೆ ಯಾವ ಸಭೆಗೂ ಕರೆಯೋದಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಚಿವ ಮತ್ತು ಶಾಸಕರ ನಡುವಿನ ಈ ಮಾತಿನ ಚಕಮಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.