ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಸುರ್ಜೆವಾಲಾ ಅವರು ತಮ್ಮನ್ನು ಸಭೆಗೆ ಕರೆದಿಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟಪಡಿಸಿದ್ದಾರೆ. “ನನ್ನನ್ನು ಸಭೆಗೆ ಕರೆದಿಲ್ಲ, ಉಳಿದವರ ವಿಚಾರ ನನಗೆ ಗೊತ್ತಿಲ್ಲ. ಕೆಲವು ಮಂತ್ರಿಗಳನ್ನು ಬಿಟ್ಟಿದ್ದೀರಿ ಎಂದು ಸುರ್ಜೆವಾಲಾರನ್ನೇ ಕೇಳಿ” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. “ಹೈಕಮಾಂಡ್ ಕರೆದರೆ ಹೋಗುತ್ತೇವೆ, ಸುರ್ಜೆವಾಲಾರ ಅಸಮಾಧಾನದ ಬಗ್ಗೆ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.
ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ದಲಿತ ಪ್ರಧಾನಿಯಾಗಿ ಮಾಡುವ ಬಗ್ಗೆ ಬಿಜೆಪಿಯ ಚರ್ಚೆಗೆ ಪ್ರತಿಕ್ರಿಯಿಸಿ, “ಪಕ್ಷದ ಧ್ಯೇಯ ಮತ್ತು ಧೋರಣೆಗೆ ಅನುಗುಣವಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರನ್ನು ಕೇಳಿ ಪ್ರಧಾನಿಯನ್ನು ಮಾಡುವುದಿಲ್ಲ. ಅವರಿಗೆ ಅಭಿವೃದ್ಧಿ, ದೇಶದ ರಕ್ಷಣೆ, ಶಾಂತಿ-ನೆಮ್ಮದಿ ಬೇಕಿಲ್ಲ, ಅದು ಅವರ ಅಜೆಂಡಾ” ಎಂದು ಟೀಕಿಸಿದರು.
ಮಾಧ್ಯಮಗಳ ಊಹಾಪೋಹಗಳ ಬಗ್ಗೆ, “ನೀವು ಒಂದು ಗಂಟೆಯಲ್ಲಿ ಮಂತ್ರಿಯನ್ನಾಗಿ, ಮುಖ್ಯಮಂತ್ರಿಯನ್ನಾಗಿ, ಪ್ರಧಾನಿಯನ್ನಾಗಿಯೂ ಮಾಡಿಬಿಡುತ್ತೀರಿ. ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುತ್ತೀರಿ. ಯಾರು, ನೀವೇನು ಬೇಕಾದರೂ ಮಾಡಿಬಿಡುತ್ತೀರಿ” ಎಂದು ವ್ಯಂಗ್ಯವಾಡಿದರು. “ಖರ್ಗೆಯವರಿಗೆ ರಾಜ್ಯದಲ್ಲೂ ಅವಕಾಶವಿದೆ ಎಂಬ ನಿಮ್ಮ ಮಾತನ್ನು ಗಮನದಲ್ಲಿಟ್ಟುಕೊಂಡಿರುತ್ತೇವೆ” ಎಂದು ಹೇಳಿದರು.