ಬೆಂಗಳೂರು: ಕಾಂಗ್ರೆಸ್ ಪಕ್ಷ ಮತ್ತು ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳಂತೆ ಎಂದು ಬಿಜೆಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿದೆ ಎಂದು ಆರೋಪಿಸಿರುವ ಅವರು, ಗೃಹ ಸಚಿವ ಜಮೀರ್ ಅಹಮದ್ ರಾಜೀನಾಮೆ ನೀಡಬೇಕು ಮತ್ತು ಸ್ವತಂತ್ರ ನ್ಯಾಯಾಂಗ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ. ರವಿ, “ಕಾಂಗ್ರೆಸ್ ಭ್ರಷ್ಟಾಚಾರವನ್ನು ಕಣ್ಣಿಗೆ ಕಾಣುವಂತೆ ಮಾಡಿದೆ. ಇದಕ್ಕೆ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಬೆಂಗಳೂರಿನಲ್ಲಿ ಬಿಲ್ಡರ್‌ಗಳಿಗೆ ಯೋಜನೆ ಮಂಜೂರಾತಿಗೆ ಪ್ರತಿ ಅಡಿಗೆ 100 ರೂ. ಮತ್ತು ಭೂ ಬದಲಾವಣೆಗೆ ಎಕರೆಗೆ 25 ಲಕ್ಷ ರೂ. ಲಂಚ ಕೊಡಬೇಕು. ಇದು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದ ಸ್ಪಷ್ಟ ಚಿತ್ರಣ,” ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲೂ ಲಂಚ ಕೊಟ್ಟರೆ ಮಾತ್ರ ಅನುದಾನ ಸಿಗುತ್ತದೆ ಎಂದು ಆರೋಪಿಸಿದ ಅವರು, “ಅಡ್ವಾನ್ಸ್, ಬಿಲ್ ಮಂಜೂರಾತಿ, ಎನ್‌ಒಸಿ, ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಲಂಚ ಕೊಡಬೇಕು. ಯಾವ ಇಲಾಖೆಯಲ್ಲೂ ಭ್ರಷ್ಟಾಚಾರದಿಂದ ಮುಕ್ತಿಯಿಲ್ಲ. ಜನರ ರಕ್ತವನ್ನು ಜಿಗಣೆಯಂತೆ ಹೀರುತ್ತಿದ್ದಾರೆ,” ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಿರುವ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ರವಿ ತಿಳಿಸಿದರು. “ಆಡಳಿತ ಪಕ್ಷದ ಶಾಸಕರೇ ಈ ರೀತಿಯ ಸಂಕಟದಲ್ಲಿದ್ದರೆ, ವಿಪಕ್ಷದ ಶಾಸಕರ ಗತಿ ಏನು? ಇದು ಗೋರ್ಕಲ್ಲ ಮೇಲೆ ಮಳೆ ಸುರಿದಂತಿದೆ,” ಎಂದು ಸರ್ವಜ್ಞನ ಉಕ್ತಿಯನ್ನು ಉಲ್ಲೇಖಿಸಿದರು.
ಮುಖ್ಯಮಂತ್ರಿಗಳು ಶಾಸಕರಾದ ಬಿ.ಆರ್. ಪಾಟೀಲ್, ಎಚ್.ಕೆ. ಪಾಟೀಲ್, ರಾಜು ಕಾಗೆ ಅವರನ್ನು ಕರೆದು ಮಾತನಾಡುವುದಾಗಿ ಹೇಳುತ್ತಾರೆ. ಆದರೆ ಇದು ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ. ಬಡವರಿಗೆ ಮನೆ ಕೊಡುವ ಯೋಜನೆಯಲ್ಲೂ ಲೂಟಿ ನಡೆದಿದೆ. ಪ್ರಾಮಾಣಿಕತೆ ಇದ್ದರೆ, ಜಮೀರ್ ಅಹಮದ್ ರಾಜೀನಾಮೆಯನ್ನು ತೆಗೆದುಕೊಂಡು, ಸ್ವತಂತ್ರ ನ್ಯಾಯಾಧೀಶರ ಸಮಿತಿಯಿಂದ ತನಿಖೆಗೆ ಆದೇಶಿಸಬೇಕು,” ಎಂದು ಸಿ.ಟಿ. ರವಿ ಒತ್ತಾಯಿಸಿದರು.