ಬೆಂಗಳೂರು: ರಾಜ್ಯದ ಸಚಿವ ಸಂಪುಟ ಪುನರಚನೆ ಕುರಿತಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ಈ ಕುರಿತು ಅಧ್ಯಕ್ಷರ ಮನೆ ಮುಂದೆ ಅಥವಾ ಮಾಧ್ಯಮದ ಮುಂದೆ ಚರ್ಚೆ ಮಾಡಲಾಗದು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ಅವರಿಂದ ಚರ್ಚೆ ನಡೆಯಲಿದೆ. ನಾವು ಮುಂದಿನ ಬೆಳವಣಿಗೆಗಳನ್ನ ನೋಡೋಣ” ಎಂದರು.
ಪರಿಷತ್ ಸ್ಥಾನಗಳ ನೇಮಕ ಕುರಿತು ಚರ್ಚೆ
ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ದೆಹಲಿಯಲ್ಲಿ ಮೇಲ್ಮನೆಯ ನಾಲ್ಕು ಸ್ಥಾನಗಳ ನೇಮಕ ಕುರಿತಂತೆ ಚರ್ಚೆ ನಡೆಯಲಿದೆ. ಆದರೆ, ಪಕ್ಷದ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಪಾಲರಿಂದ ವಾಪಸ್ ಆದ ಬಿಲ್ ಕುರಿತು ಪ್ರತಿಕ್ರಿಯೆ
ರಾಜ್ಯಪಾಲರು ಬಿಲ್ ವಾಪಸ್ ಮಾಡಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇದರಲ್ಲೇನು ಹೊಸದು? ತಮಿಳುನಾಡಲ್ಲೂ ಇದೇ ರೀತಿ ನಡೆದಿದೆ. ನಾವು ಸ್ಪಷ್ಟನೆ ನೀಡಬೇಕಾದರೆ ನೀಡಬಹುದು. ಸದನದಲ್ಲಿ ಚರ್ಚೆ ನಡೆದ ನಂತರ ಮಾತ್ರ ಬಿಲ್ ಅಂಗೀಕಾರವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೊಸದೇನೂ ಇಲ್ಲ” ಎಂದು ಹೇಳಿದರು.
೧೮ ಶಾಸಕರ ಅಮಾನತಿನ ಕುರಿತ ಹೇಳಿಕೆ
೧೮ ಶಾಸಕರ ಅಮಾನತು ಕುರಿತು ಮಾತನಾಡಿದ ಖರ್ಗೆ, “ಅವರ ನಡವಳಿಕೆಯಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸದನದಲ್ಲಿ ಚರ್ಚೆ ಮಾಡಬೇಕಾಗಿತ್ತು. ಆದರೆ, ಅವರು ಸ್ಪೀಕರ್ ಕುರ್ಚಿಯ ಬಳಿ ಹೋಗಿ ಪುಸ್ತಕ ಹರಿಯುವುದು, ಚೆಲ್ಲುವುದು ಮಾಡಿದರು. ನಾನು ಇದ್ದರೆ ಒಂದು ವರ್ಷಕ್ಕೂ ಅಮಾನತು ಮಾಡುತ್ತಿದ್ದೆ. ಶಾಸಕರಿಗೆ ಎಲ್ಲಾ ಸೌಲಭ್ಯಗಳು ಬೇಕು, ಆದರೆ ಜವಾಬ್ದಾರಿ ಮತ್ತು ಕರ್ತವ್ಯ ಅರಿವಿಲ್ಲವೇ?” ಎಂದು ಕಿಡಿ ಕಾರಿದರು.
ಬೆಲೆ ಏರಿಕೆ ವಿರುದ್ದ ಬಿಜೆಪಿ ಪ್ರತಿಭಟನೆ ಕುರಿತು ಟೀಕೆ
ರಾಜ್ಯದಲ್ಲಿ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, “ಇದು ಬಹಳ ಒಳ್ಳೆಯದು. ಕೊನೆಗೂ ಅವರಿಗೆ ಜ್ಞಾನೋದಯವಾಗಿದೆ. ಆದರೆ, ಇದು ರಾಜ್ಯ ಸರ್ಕಾರವಿರುದ್ದವಲ್ಲ, ಕೇಂದ್ರ ಸರ್ಕಾರದ ವಿರುದ್ಧ ಮಾಡಿದರೆ ಉತ್ತಮವಾಗಿರುತ್ತಿತ್ತು. ಮೋದಿ ಅವರ ಆರ್ಥಿಕ ನೀತಿಯೇ ಜನರ ಬದುಕನ್ನು ನರಕವನ್ನಾಗಿ ಮಾಡಿದೆ. ದೇಶದ ಇಂದಿನ ಆರ್ಥಿಕ ಸ್ಥಿತಿಗೆ ಅವರ ‘ಮಾಸ್ಟರ್ ಸ್ಟ್ರೋಕ್’ ಮತ್ತು ಆದಾನಿ-ಅಂಬಾನಿ ಪರ ನೀತಿಗಳು ಕಾರಣ” ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ತೀವ್ರ ತಿರುಗುಬಾಣ ಹೊಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನರಚನೆ, ಪರಿಷತ್ ಸದಸ್ಯರ ನೇಮಕ ಮತ್ತು ಬೆಲೆ ಏರಿಕೆ ಹೋರಾಟ ರಾಜಕೀಯ ಕ್ಷಿತಿಜದಲ್ಲಿ ಮಹತ್ವದ ಬೆಳವಣಿಗೆ ತರಲಿವೆ ಎಂಬುದು ಸ್ಪಷ್ಟವಾಗಿದೆ.