ಬೆಂಗಳೂರು: ಹಳ್ಳಿಯೊಬ್ಬ ಯುವಕನ ಸೇವಾ ಮನೋಭಾವದ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿರುವ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಚಿತ್ರದ ಟೀಸರ್ ಅನ್ನು ಸಚಿವ ಹೆಚ್.ಕೆ. ಪಾಟೀಲ ಬಿಡುಗಡೆ ಮಾಡಿದರು. ಈ ಚಿತ್ರಕ್ಕೆ ಹೊನ್ನರಾಜ್ ಕಥೆ, ಚಿತ್ರಕಥೆ ಬರೆದಿದ್ದು, ಅವರೇ ಮೊದಲಬಾರಿಗೆ ನಿರ್ದೇಶನ ಮಾಡಿರುವುದು ವಿಶೇಷ. ಜೊತೆಗೆ, ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ.
ಹೊನ್ನರಾಜ್ ಹುಟ್ಟುಹಬ್ಬದ ಪ್ರಯುಕ್ತ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಪಾಟೀಲ, “ಹೊನ್ನರಾಜ್ ಅವರು ದೊಡ್ಡ ಕನಸುಗಳನ್ನು ಹೊಂದಿದ್ದಾರೆ. ಈ ಚಿತ್ರ ಮಾಡಲು ಅವರು ಅಪಾರ ಪರಿಶ್ರಮ ಹಾಕಿದ್ದಾರೆ. ಬೆವರು, ರಕ್ತ ಸುರಿಸಿ ಈ ಮಟ್ಟಕ್ಕೆ ತಲುಪಿದ್ದಾರೆ. ಈ ಚಿತ್ರದಿಂದ ಅವರಿಗೆ ಉತ್ತಮ ಹೆಸರು ಮತ್ತು ಪ್ರಶಸ್ತಿ ದೊರಕಲಿ” ಎಂದು ಹಾರೈಸಿದರು.
ಯಶ್ ಅಭಿಮಾನಿಯಾಗಿ ಹೊನ್ನರಾಜ್
ನಾಯಕ ಹಾಗೂ ನಿರ್ದೇಶಕ ಹೊನ್ನರಾಜ್ ಮಾತನಾಡಿ, “ನಾನು ಪಾಟೀಲರ ಮನೆಯ ಮುಂದೆ ಆಡಿ ಬೆಳೆದ ಹುಡುಗ. ಈ ಕಥೆ ರೆಡಿ ಮಾಡಿಕೊಂಡು ಅವರಿಗೆ ಹೇಳಿದೆ. ಅವರ ಸಹಕಾರದಿಂದ ಈ ಸಿನಿಮಾ ನಿರ್ಮಾಣ ಸಾಧ್ಯವಾಯಿತು. ಇದು ನೈಜ ಘಟನೆಯನ್ನು ಆಧರಿಸಿದ ಕುಟುಂಬ ಮನರಂಜನೆ ಚಿತ್ರ. ಚಿತ್ರದಲ್ಲಿ ನಾನು ಯಶ್ ಅಭಿಮಾನಿಯಾಗಿಯೇ ಕಾಣಿಸುತ್ತೇನೆ. ಸ್ನೇಹಕ್ಕೆ ಬೆಲೆ ಕೊಡುವ, ಸಮಾಜ ಸೇವೆಯಲ್ಲಿ ತೊಡಗಿರುವ ಈ ಯುವಕ ಮದುವೆಯಾಗ್ತಾನೋ ಇಲ್ಲವೋ ಎಂಬುದೇ ಚಿತ್ರದ ಪ್ರಮುಖ ಕಥಾಹಂದರ” ಎಂದು ವಿವರಿಸಿದರು.
ಚಿತ್ರೀಕರಣ ಸ್ಥಳಗಳು: ಮದ್ದೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.
ಚಿತ್ರದ ತಾರಾಗಣ ಹಾಗೂ ತಾಂತ್ರಿಕ ತಂಡ
- ನಾಯಕಿ: ಶೃತಿ ಬಬಿತ (ಬಜಾರಿ ಹುಡುಗಿಯಾಗಿ)
- ಸಂಗೀತ: ವಿನು ಮನಸು
- ಛಾಯಾಗ್ರಹಣ: ಶಿವಪುತ್ರ
- ನೃತ್ಯ ನಿರ್ದೇಶನ: ಗಿರೀಶ್
- ಪಾತ್ರಧಾರಿಗಳು: ಮೈಸೂರು ಮಂಜುಳ, ರೇಖಾ ದಾಸ್ ಮತ್ತಿತರರು
ಈ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕಿ ಮಂಜುಳಾ ರಾಘವೇಂದ್ರ, ಕಾರ್ಯಕಾರಿ ನಿರ್ಮಾಪಕ ಸಂಜಯ್ ಶ್ರೀನಿವಾಸ್, ಮಾಜಿ ಮಹಾಪೌರ ಹುಚ್ಚಪ್ಪ, ನಿರ್ಮಾಪಕರು ಕಲ್ಕೆರೆ ಸುನಿಲ್, ಎಂ. ಮುನಿರಾಜು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘U/A’ ಪ್ರಮಾಣಪತ್ರ ಪಡೆದುಕೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.