ಬೆಂಗಳೂರು, ಮೇ 30, 2025: “ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಲವಾಗಿವೆ. ಈ ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆಹರಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಾಗಿದ್ದೇವೆ,” ಎಂದು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಶುಕ್ರವಾರ ನಡೆದ ಇಂಡಿಯಾ ಎಂಎಸ್‌ಎಂಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ, ಕೈಗಾರಿಕೆಗಳಿಗೆ ವಿದ್ಯುತ್, ನೀರು ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು.
“ಬೆಂಗಳೂರಿನ ಜನಸಂಖ್ಯೆ ಕಳೆದ 20 ವರ್ಷಗಳಲ್ಲಿ 70 ಲಕ್ಷದಿಂದ 1.5 ಕೋಟಿಗೆ ಏರಿಕೆಯಾಗಿದೆ. ಆದರೆ ರಸ್ತೆಗಳ ಸಾಮರ್ಥ್ಯವು ಬದಲಾಗಿಲ್ಲ, ಇದರಿಂದ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ. ಈ ಸವಾಲುಗಳನ್ನು ಎದುರಿಸಲು ಕಳೆದ ಎರಡು ವರ್ಷಗಳಿಂದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮೆಟ್ರೋ ಯೋಜನೆಗೆ 44,000 ಕೋಟಿ, ಟನಲ್ ರಸ್ತೆಗೆ 17,000 ಕೋಟಿ, ಮತ್ತು ಎಲಿವೇಟೆಡ್ ಕಾರಿಡಾರ್‌ಗಳಿಗೆ 14,000 ಕೋಟಿ ಸೇರಿದಂತೆ, ಮುಂದಿನ 4-5 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗುತ್ತಿದೆ,” ಎಂದು ಶಿವಕುಮಾರ್ ವಿವರಿಸಿದರು.
ಕೈಗಾರಿಕೆಗಳ ಬೆನ್ನೆಲುಬು: ಎಂಎಸ್‌ಎಂಇ
“ಪೀಣ್ಯ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಕೈಗಾರಿಕಾ ಪ್ರದೇಶಗಳು ರಾಷ್ಟ್ರಮಟ್ಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಎಂಎಸ್‌ಎಂಇಗಳು ಸರ್ಕಾರಕ್ಕೆ ಸಾಧ್ಯವಾಗದ ಕೆಲಸವನ್ನು ಮಾಡಿ, ಕೋಟ್ಯಂತರ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಮೂಲಕ ಆಧಾರವಾಗಿವೆ,” ಎಂದು ಡಿಸಿಎಂ ಶ್ಲಾಘಿಸಿದರು. “ನೀವು ಬಲಿಷ್ಠರಾದರೆ ಸರ್ಕಾರವೂ ಬಲಿಷ್ಠವಾಗುತ್ತದೆ. ದುರ್ಬಲರಾದರೆ ಸರ್ಕಾರವೂ ದುರ್ಬಲವಾಗುತ್ತದೆ. ಇಂದಿನ ಜಾಗತಿಕ ಸ್ಪರ್ಧೆಯಲ್ಲಿ ಎಂಎಸ್‌ಎಂಇಗಳು ಮುಂಚೂಣಿಯಲ್ಲಿರಬೇಕು,” ಎಂದು ಅವರು ಒತ್ತಿ ಹೇಳಿದರು.
ಪ್ರತಿಭೆ ಮತ್ತು ಅವಕಾಶಗಳು
ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಶಿವಕುಮಾರ್, “ನಾನು ಹಳ್ಳಿಯಲ್ಲಿ ಹುಟ್ಟಿದರೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದೆ. ಕೈಗಾರಿಕೆಗಳ ಶ್ರಮ ಮತ್ತು ಫಲದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಯುವಕರಿಗೆ ಉದ್ಯೋಗ ಪಡೆಯುವುದಷ್ಟೇ ಗುರಿಯಾಗಿರದೇ, ಉದ್ಯೋಗ ಸೃಷ್ಟಿಸುವ ಕನಸು ಕಾಣಬೇಕು ಎಂದು ಸದಾ ಹೇಳುತ್ತೇನೆ,” ಎಂದರು.
ಕೆ.ಆರ್. ಪುರಂನ ಒಂದು ಸಣ್ಣ ಕೈಗಾರಿಕೆಗೆ ಇಸ್ರೇಲ್ ಕಂಪನಿಯೊಂದು ಯಂತ್ರೋಪಕರಣಗಳ ಬಿಡಿಭಾಗಗಳ ತಯಾರಿಕೆಯ ಜವಾಬ್ದಾರಿಯನ್ನು ವಹಿಸಿರುವ ಬಗ್ಗೆ ಉದಾಹರಣೆ ನೀಡಿದ ಅವರು, “ಭಾರತದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಇಂತಹ ಪ್ರತಿಭೆಗಳಿವೆ. ಇದು ಜಾಗತಿಕ ಮಟ್ಟದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದರು.
ವಿದೇಶಿ ಅವಲಂಬನೆ ಕಡಿಮೆಗೊಳಿಸಿ
ತಮ್ಮ ಸಹೋದರನ ರೇಷ್ಮೆ ಕೈಗಾರಿಕೆಯ ಉದಾಹರಣೆಯನ್ನು ನೀಡಿದ ಡಿಸಿಎಂ, “ಚೀನಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರೂ, ವೀಸಾ ಸಮಸ್ಯೆಯಿಂದ ತಂತ್ರಜ್ಞಾನ ತರಬೇತಿಗೆ ತೊಂದರೆಯಾಗಿದೆ. ಆದರೂ, ನನ್ನ ಸಹೋದರ ಪ್ರಯತ್ನ ಮುಂದುವರಿಸಿದ್ದಾನೆ. ನಾವು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಜಾಗತಿಕ ಸ್ಪರ್ಧೆಯಲ್ಲಿ ಭಾರತದ ಅವಕಾಶ
“ಅಮೆರಿಕದಲ್ಲಿ ಉತ್ಪಾದನೆ ಮಾಡುವುದಕ್ಕಿಂತ ಭಾರತದಲ್ಲಿ 10 ಪಟ್ಟು ಕಡಿಮೆ ವೆಚ್ಚವಾಗುತ್ತದೆ, ಚೀನಾದಲ್ಲಿ 4 ಪಟ್ಟು ಹೆಚ್ಚು. ಇದು ಭಾರತಕ್ಕಿರುವ ದೊಡ್ಡ ಅವಕಾಶ. ವಿಶ್ವದ ಅನೇಕ ರಾಷ್ಟ್ರಗಳಿಗೆ ಇದು ಮನವರಿಕೆಯಾಗಿದೆ,” ಎಂದು ಶಿವಕುಮಾರ್ ಒತ್ತಿ ಹೇಳಿದರು. “ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರದೊಂದಿಗೆ ‘ಮೇಕ್ ಇನ್ ಇಂಡಿಯಾ’ ಚಿಂತನೆಗೆ ಒತ್ತು ನೀಡಿದರೆ, ನಮ್ಮ ಪ್ರತಿಭೆಗಳು ಇಲ್ಲಿಯೇ ಉಳಿಯುತ್ತವೆ. ರಾಜ್ಯದ 250 ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಹೊಮ್ಮುವ ಯುವಕರನ್ನು ಇಲ್ಲಿಯೇ ಬಳಸಿಕೊಳ್ಳಬೇಕು,” ಎಂದರು.
ಮುಂದಿನ ಯೋಜನೆಗಳು
“ಬೆಂಗಳೂರು ಯೋಜಿತ ನಗರವಲ್ಲ, ಆದರೂ ನಾವು ಇದನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದೇವೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೂ ಆದ್ಯತೆ ನೀಡಬೇಕು. ಎಂಎಸ್‌ಎಂಇಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ,” ಎಂದು ಡಿಸಿಎಂ ತಿಳಿಸಿದರು.
ಈ ಸಮಾವೇಶವು ಎಂಎಸ್‌ಎಂಇಗಳ ಸಮಸ್ಯೆಗಳನ್ನು ಚರ್ಚಿಸಲು ಮತ್ತು ರಾಜ್ಯದ ಕೈಗಾರಿಕಾ ಪ್ರಗತಿಗೆ ರೂಪುರೇಷೆ ಒದಗಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿತು.